ಭಾರತಕ್ಕೆ ಐದು ಚಿನ್ನ ಶಾರ್ಜಾ: ಭಾರತದ ಜೂನಿಯರ್‌ ಆರ್ಚರಿ ಸ್ಪರ್ಧಿಗಳು ಇಲ್ಲಿ ನಡೆದ ಏಷ್ಯಾ ಕಪ್‌ ಸ್ಟೇಜ್‌–3 ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ಭಾನುವಾರ ಐದು ಚಿನ್ನ, ಮೂರು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಗೆದ್ದುಕೊಂಡರು. ಕಾಂಪೌಂಡ್‌ ವಿಭಾಗದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ಭಾರತ ತಂಡ, ಪಣಕ್ಕಿಟ್ಟಿದ್ದ ಎಂಟು ಪದಕಗಳಲ್ಲಿ ಏಳನ್ನೂ ತಮ್ಮದಾಗಿಸಿಕೊಂಡರು. ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಪ್ರಗತಿ, ಅದಿತಿ ಸ್ವಾಮಿ ಮತ್ತು ಪರಿಣೀತ್‌ ಕೌರ್‌ ಅವರು ಕ್ರಮವಾಗಿ ಚಿನ್ನ, ಬೆಳ್ಳಿ ಹಾಗೂ ಕಂಚು ಗೆದ್ದು ‘ಕ್ಲೀನ್‌ಸ್ವೀಪ್‌’ ಸಾಧನೆ ಮಾಡಿದರು. ಪ್ರಿಯಾಂಶ್‌ ಮತ್ತು ಓಜಸ್‌ ಅವರು ಪುರುಷರ ಕಾಂಪೌಂಡ್‌ ವೈಯಕ್ತಿಕ ವಿಭಾಗದಲ್ಲಿ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಗೆದ್ದುಕೊಂಡರು. ಕಾಂಪೌಂಡ್‌ ಸ್ಪರ್ಧೆ ತಂಡ ವಿಭಾಗದಲ್ಲಿ ಭಾರತದ ಪುರುಷರು ಹಾಗೂ ಮಹಿಳೆಯರು, ಕೊರಿಯಾ ತಂಡವನ್ನು ಮಣಿಸಿ ಚಿನ್ನ ಜಯಿಸಿದರು. ಕಾಂಪೌಂಡ್‌ ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಮಾತ್ರ ಭಾರತ ಪದಕ ಗೆಲ್ಲುವಲ್ಲಿ ವಿಫಲವಾಯಿತು. ಓಜಸ್‌ ಮತ್ತು ಪ್ರಗತಿ ಅವರು ಕ್ವಾರ್ಟರ್‌ ಫೈನಲ್‌ನಲ್ಲಿ ಸೋತರು. ರಿಕರ್ವ್‌ ವಿಭಾಗದಲ್ಲಿ ಭಾರತದ ಸ್ಪರ್ಧಿಗಳು ತಲಾ ಒಂದು ಚಿನ್ನ ಮತ್ತು ಬೆಳ್ಳಿ ಗೆದ್ದುಕೊಂಡರು. ಪುರುಷರ ತಂಡ ವಿಭಾಗದಲ್ಲಿ ಆಕಾಶ್‌ ಮೃಣಾಲ್‌ ಮತ್ತು ಪಾರ್ಥ್‌ ಸಾಲುಂಕೆ ಅವರು ಕೊರಿಯಾದ ಎದುರಾಳಿಗಳನ್ನು ಮಣಿಸಿ ಚಿನ್ನ ಗೆದ್ದರು. ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಸಾಲುಂಕೆ ಹಾಗೂ ತಿಶಾ ಪೂನಿಯಾ, ಬೆಳ್ಳಿ ಪದಕ ಪಡೆದರು. ಫೈನಲ್‌ನಲ್ಲಿ ಅವರು ಚೀನಾ ತೈಪೆಯ ಕಯ್ ಹಾನ್ ಯಾಂಗ್‌ ಮತ್ತು ಸು ಮಿನ್ ಸು ಎದುರು ಪರಾಭವಗೊಂಡರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.