ಜೂನಿಯರ್ ಮಹಿಳಾ ಏಷ್ಯಾ ಕ‍ಪ್ ಹಾಕಿ: ಭಾರತಕ್ಕೆ ಚೊಚ್ಚಲ ಕಿರೀಟ ಕಾಕಾಮಿಗಾರಾ, ಜಪಾನ್: ಸಾಂಘಿಕ ಪ್ರದರ್ಶನ ನೀಡಿದ ಭಾರತ ತಂಡ, ಮಹಿಳೆಯರ ಜೂನಿಯರ್‌ ಏಷ್ಯಾ ಕಪ್‌ ಹಾಕಿ ಟೂರ್ನಿಯ ಫೈನಲ್‌ನಲ್ಲಿ ದಕ್ಷಿಣ ಕೊರಿಯಾ ತಂಡದ ಮೇಲೆ ಭಾನುವಾರ 2–1 ಗೋಲುಗಳ ಅಚ್ಚರಿಯ ಜಯಗಳಿಸಿ ಮೊದಲ ಬಾರಿ ಪ್ರಶಸ್ತಿ ಗೆದ್ದುಕೊಂಡಿತು. ಅನು ಮತ್ತು ನೀಲಂ ಅವರು ಭಾರತ ತಂಡದ ಪರ ಗೋಲುಗಳನ್ನು ಗಳಿಸಿದರೆ, ನಾಲ್ಕು ಬಾರಿಯ ಚಾಂಪಿಯನ್‌ ಕೊರಿಯಾ ಪರ ಏಕೈಕ ಗೋಲನ್ನು ಪಾರ್ಕ್‌ ಸಿಯೊ ಯೊನ್‌ ಗಳಿಸಿದರು. ಶನಿವಾರ ನಡೆದ ಸೆಮಿಫೈನಲ್‌ನಲ್ಲಿ ಜಪಾನ್‌ ತಂಡವನ್ನು 1–0 ಯಿಂದ ಸೋಲಿಸಿ ಫೈನಲ್‌ ಪ್ರವೇಶಿಸಿತ್ತು. ಆ ಮೂಲಕ ವರ್ಷಾಂತ್ಯಕ್ಕೆ ನಡೆಯುವ ಜೂನಿಯರ್‌ ಮಹಿಳಾ ವಿಶ್ವಕಪ್‌ಗೂ ಅರ್ಹತೆ ಪಡೆದಿತ್ತು. 2012ರಲ್ಲಿ ಫೈನಲ್‌ಗೆ ತಲುಪಿದ್ದೇ ಭಾರತ ತಂಡದ ಇದುವರೆಗಿನ ಶ್ರೇಷ್ಠ ಸಾಧನೆಯಾಗಿತ್ತು. ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ನಡೆದ ಆ ಬಾರಿಯ ಟೂರ್ನಿಯ ಫೈನಲ್‌ನಲ್ಲಿ ಚೀನಾದ ವಿರುದ್ಧ 2–5 ಗೋಲುಗಳಿಂದ ಸೋಲು ಅನುಭವಿಸಿತ್ತು. 22ನೇ ನಿಮಿಷ ಅನು ಪೆನಾಲ್ಟಿ ಕಾರ್ನರ್‌ನಲ್ಲಿ ಭಾರತದ ಮೊದಲ ಗೋಲು ಬಾರಿಸಿದರು. ಸೆಮಿಫೈನಲ್‌ನಲ್ಲಿ ಜಪಾನ್‌ ವಿರುದ್ಧ ಮಾಡಿದ್ದ ತಪ್ಪನ್ನು ಪುನರಾವರ್ತನೆ ಮಾಡದೆ ಭಾರತಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು. ಇದಾದ ಮೂರೇ ನಿಮಿಷಕ್ಕೆ ಎದುರಾಳಿ ತಂಡದ ಪಾರ್ಕ್ ಸಿಯೊ ಯೆನ್ (24ನೇ ನಿ.) ಚಾಣಾಕ್ಷ ಹೊಡೆತದ ಮೂಲಕ ಗೋಲು ಗಳಿಸಿ ಸಮಬಲ ಸಾಧಿಸಿದರು. ವಿರಾಮದ ವೇಳೆ ಸ್ಕೋರ್‌ 1–1ರಲ್ಲಿ ಸಮನಾಗಿತ್ತು. ಮೂರನೇ ಕ್ವಾರ್ಟರ್‌ನಲ್ಲಿ ನೀಲಂ ಅವರು 41ನೇ ನಿಮಿಷ ದೊರೆತ ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಚೆಂಡನ್ನು ಬಿರುಸಿನಿಂದ ಗೋಲ್‌ಕೀಪರ್‌ ಬಲಬದಿಯಿಂದ ಗುರಿತಲುಪಿಸಿ ಭಾರತಕ್ಕೆ ಮತ್ತೆ ಮುನ್ನಡೆ ತಂದುಕೊಟ್ಟರು. ಕೊರಿಯಾ ಆಟಗಾರರೂ ಸಾಕಷ್ಟು ದಾಳಿಗಳನ್ನು ನಡೆಸಿದರು. ಆದರೆ ಅವಕಾಶಗಳನ್ನು ಪರಿವರ್ತಿಸಲು ವಿಫಲವಾದರು. ಕೊನೆಯ ಕ್ವಾರ್ಟರ್‌ನಲ್ಲಿ ಭಾರತ ತಂಡ ಮುನ್ನಡೆ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ರಕ್ಷಣೆಯತ್ತ ಹೆಚ್ಚಿನ ಗಮನಹರಿಸಿತು. ಹೀಗಾಗಿ ಚೆಂಡು ಭಾರತದ ಆಟಗಾರ್ತಿಯರ ಬಳಿಯೇ ಇತ್ತು. ಸಮ ಮಾಡಿಕೊಳ್ಳುವ ಹತಾಶ ಯತ್ನದಲ್ಲಿ ಕೊರಿಯಾ ಆಟಗಾರ್ತಿಯರು ಕೆಲವೊಮ್ಮೆ ಮುನ್ನುಗಿದ್ದರೂ ತಪ್ಪು ಪಾಸ್‌ಗಳಿಂದಾಗಿ ಎಡವಿದರು. ‘ರೌಂಡ್‌ ರಾಬಿನ್‌ ಲೀಗ್‌ ಹಂತದಲ್ಲಿ ದಕ್ಷಿಣ ಕೊರಿಯಾ ವಿರುದ್ಧದ ಪಂದ್ಯದಲ್ಲಿ 1–1 ಡ್ರಾ ಸಾಧಿಸಿದ ನಂತರ ಫೈನಲ್‌ನಲ್ಲಿ ಆ ತಂಡದ ವಿರುದ್ಧ ಹೆಣೆದಿದ್ದ ತಂತ್ರಕ್ಕೆ ತಕ್ಕಂತೆ ಆಡಿದೆವು’ ಎಂದು ‘ಪಂದ್ಯದ ಆಟಗಾರ್ತಿ’ ಪುರಸ್ಕಾರಕ್ಕೆ ಪಾತ್ರರಾದ ತಂಡದ ನಾಯಕಿ ಪ್ರೀತಿ ಪ್ರತಿಕ್ರಿಯಿಸಿದರು. ನಗದು ‌ಬಹುಮಾನ ಘೋಷಣೆ: ಮೊದಲ ಬಾರಿ ಪ್ರಶಸ್ತಿಯನ್ನು ಗೆದ್ದ ಆಟಗಾರ್ತಿಯರಿಗೆ ತಲಾ ₹2 ಲಕ್ಷ ಮತ್ತು ನೆರವು ಸಿಬ್ಬಂದಿಗೆ ತಲಾ ₹1 ಲಕ್ಷ ನಗದು ಬಹುಮಾನವನ್ನು ಹಾಕಿ ಇಂಡಿಯಾ ಘೋಷಣೆ ಮಾಡಿದೆ. ‘ಮಹಿಳೆಯರ ಜೂನಿಯರ್‌ ತಂಡವು ಅದ್ಘುತವಾಗಿ ಪ್ರದರ್ಶನ ನೀಡಿ ಪ್ರಶಸ್ತಿಯನ್ನು ಗೆದ್ದಿರುವುದು ಹೆಮ್ಮೆಯ ವಿಚಾರ. ಮುಂಬರುವ ಜೂನಿಯರ್‌ ವಿಶ್ವಕಪ್‌ ಟೂರ್ನಿಗೆ ಇದು ಉತ್ತಮ ಅಡಿಪಾಯ’ ಎಂದು ಹಾಕಿ ಇಂಡಿಯಾದ ಅಧ್ಯಕ್ಷ ದಿಲೀಪ್‌ ಠಾಕ್ರೆ ಪ್ರತಿಕ್ರಿಯಿಸಿದ್ದಾರೆ. ಭಾರತ ತಂಡ ಟೂರ್ನಿಯಲ್ಲಿ ಅಜೇಯ ಸಾಧನೆ ಪ್ರದರ್ಶಿಸಿದ್ದು, ಚಿಲಿಯಲ್ಲಿ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಜೂನಿಯರ್‌ ವಿಶ್ವ ಕಪ್‌ನಲ್ಲಿ ಸ್ಥಾನವನ್ನು ಕಾದಿರಿಸಿದೆ. ‘ಜೂನಿಯರ್‌ ತಂಡದ ಸಾಧನೆಯಿಂದ ನಮಗೆ ಹೆಮ್ಮೆಯೆನಿಸಿದೆ’ ಎಂದು ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್‌ ಟಿರ್ಕಿ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.