ಏಷ್ಯನ್‌ ಅಥ್ಲೆಟಿಕ್ಸ್: ಭಾರತ ತಂಡದಲ್ಲಿ ಯಶಸ್‌, ಮನು ನವದೆಹಲಿ (ಪಿಟಿಐ): ಬ್ಯಾಂಕಾಕ್‌ನಲ್ಲಿ ಜುಲೈ 12 ರಿಂದ 16ರವರೆಗೆ ನಡೆಯಲಿರುವ ಏಷ್ಯನ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ಗೆ 54 ಸದಸ್ಯರ ಭಾರತ ತಂಡವನ್ನು ಗುರುವಾರ ಆಯ್ಕೆ ಮಾಡಲಾಗಿದೆ. ಕರ್ನಾಟಕದ 400 ಮೀ. ಹರ್ಡಲ್ಸ್‌ ಓಟಗಾರ ಯಶಸ್‌ ಪಿ., ಜಾವೆಲಿನ್‌ ಥ್ರೊ ಸ್ಪರ್ಧಿ ಡಿ.ಪಿ.ಮನು ತಂಡದಲ್ಲಿದ್ದಾರೆ. ರಿಲೇ ಓಟಗಾರರಾದ ನಿಹಾಲ್ ಜೋಯೆಲ್‌, ಮಿಜೊ ಚಾಕೊ ಕುರಿಯನ್‌ ಅವರೂ ಅವಕಾಶ ಪಡೆದಿದ್ದಾರೆ. ಅಗ್ರಮಾನ್ಯ ಲಾಂಗ್‌ಜಂಪ್‌ ಪಟು ಮುರಳಿ ಶ್ರೀಶಂಕರ್‌, ಏಷ್ಯನ್‌ ದಾಖಲೆ ಹೊಂದಿರುವ ಶಾಟ್‌ಪಟ್‌ ಸ್ಪರ್ಧಿ ತಜಿಂದರ್‌ಪಾಲ್‌ ತೂರ್, ನೂತನ ಡೆಕಾಥ್ಲಾನ್ ಚಾಂಪಿಯನ್‌ ತೇಜಸ್ವಿನ್‌ ಶಂಕರ್‌, ಮಹಿಳೆಯರ ವಿಭಾಗದಲ್ಲಿ ಲಾಂಗ್‌ಜಂಪ್‌ ಸ್ಪರ್ಧಿ ಶೈಲಿ ಸಿಂಗ್‌ ತಂಡದಲ್ಲಿ ಇರುವ ಪ್ರಮುಖರಲ್ಲಿ ಒಳಗೊಂಡಿದ್ದಾರೆ. ತಂಡದಲ್ಲಿ 26 ಮಂದಿ ಮಹಿಳಾ ಅಥ್ಲೀಟುಗಳಿದ್ದಾರೆ. ಭಾರತ ಅಥ್ಲೆಟಿಕ್‌ ಫೆಡರೇಷನ್‌ನ ಆಯ್ಕೆ ಸಮಿತಿ ತಂಡ ಪ್ರಕಟಿಸಿದೆ. ಒಲಿಂಪಿಕ್ ಚಾಂಪಿಯನ್‌ ನೀರಜ್‌ ಚೋಪ್ರಾ ಮತ್ತು 3000 ಮೀ. ಸ್ಟೀಪಲ್‌ಚೇಸ್‌ನಲ್ಲಿ ಕಾಮನ್ವೆಲ್ತ್‌ ಗೇಮ್ಸ್‌ ಬೆಳ್ಳಿ ಪದಕ ವಿಜೇತ ಅವಿನಾಶ್ ಸಾಬ್ಳೆ ಅವರಿಬ್ಬರೂ ಆಗಸ್ಟ್‌ ತಿಂಗಳಲ್ಲಿ ಬುಡಾಪೆಸ್ಟ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಷಿಪ್‌ಗೆ ತರಬೇತಿಯಲ್ಲಿ ಇರುವ ಕಾರಣ ಈ ಕೂಟದಲ್ಲಿ ಭಾಗವಹಿಸುತ್ತಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.