ಶೂಟಿಂಗ್‌: ರಾಜ್ಯಕ್ಕೆ ಆರು ಪದಕ ಹುಬ್ಬಳ್ಳಿ: ಕರ್ನಾಟಕದ ಶೂಟರ್‌ಗಳು ಮಧ್ಯಪ್ರದೇಶದ ಇಂದೋರ್‌ನ ಸೈನಿಕ ಶೂಟಿಂಗ್ ರೇಂಜ್‌ನಲ್ಲಿ ನಡೆದ 3ನೇ ರಾಷ್ಟ್ರೀಯ ಪ್ಯಾರಾ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕು ಚಿನ್ನ, ಒಂದು ಬೆಳ್ಳಿ ಹಾಗೂ ಒಂದು ಕಂಚು ಗೆದ್ದಿದ್ದಾರೆ. ರಾಜ್ಯವನ್ನು ಪ್ರತಿನಿಧಿಸಿದ್ದ ಶ್ರೀಹರ್ಷ ದೇವರೆಡ್ಡಿ 10 ಮೀ ಏರ್‌ ರೈಫಲ್‌ ಸ್ಟ್ಯಾಂಡಿಂಗ್‌, 10 ಮೀ ಏರ್‌ ರೈಫಲ್‌ ಪ್ರೋನ್‌ ಹಾಗೂ 50 ಮೀ ರೈಫಲ್‌ ಪ್ರೋನ್‌ ವಿಭಾಗದಲ್ಲಿ ಚಿನ್ನ ಜಯಿಸಿದರು. ಹುಬ್ಬಳ್ಳಿ ಶೂಟಿಂಗ್ ಅಕಾ ಡೆಮಿಯಲ್ಲಿ ತರಬೇತಿ ಪಡೆದಿರುವ ರಾಕೇಶ ನಿಡಗುಂದಿ 50 ಮೀ ರೈಫಲ್‌ ತ್ರಿಪೊಸಿಸ್ನಿಂಗ್‌ನ ವೈಯಕ್ತಿಕ ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದಾರೆ. ತಂಡ ವಿಭಾಗದಲ್ಲಿ ರಾಕೇಶ, ಸಚಿನ ಸಿದ್ಧಣವರ ಮತ್ತು ಜ್ಯೋತಿ ಸಣ್ಣಕ್ಕಿ ಅವರಿದ್ದ ತಂಡ 10 ಮೀ ಏರ್‌ ರೈಫಲ್‌ ಪ್ರೋನ್‌ ಮಿಕ್ಸಡ್‌ ವಿಭಾಗ ದಲ್ಲಿ ಚಿನ್ನಕ್ಕೆ ಗುರಿಯಿಟ್ಟಿತು. ಇದೇ ತಂಡವು 50 ಮೀ ರೈಫಲ್‌ ಪ್ರೋನ್‌ ಮಿಕ್ದೆಡ್‌ ವಿಭಾಗದಲ್ಲಿ ಕಂಚು ಗೆದ್ದಿತು. ಟೂರ್ನಿಯಲ್ಲಿ ಕರ್ನಾಟಕದ 13 ಶೂಟರ್‌ಗಳು ಪಾಲ್ಗೊಂಡಿದ್ದರು.ಇದಕ್ಕೂ ಮುನ್ನ ಅಲ್ಲಿಯೇ ನಡೆದ 3ನೇ ವಲಯ ಪ್ಯಾರಾ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ 50 ಮೀ ರೈಫಲ್‌ ತ್ರಿಪೊಸಿಸ್ನಿಂಗ್‌ ವಿಭಾಗದಲ್ಲಿ ರಾಕೇಶ ಚಿನ್ನ ಗೆದ್ದರೆ, ಸಚಿನ್ ಸಿದ್ದಣವರ 50 ಮೀ ರೈಫಲ್‌ ಪ್ರೋನ್‌ ಮಿಕ್ಸಡ್‌ ವಿಭಾಗದಲ್ಲಿ ಕಂಚಿನ ಪದಕ ಪಡೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.