ಕುಸ್ತಿ: ಧರೆಪ್ಪಗೆ ಕಂಚು ದಾವಣಗೆರೆ: ಕರ್ನಾಟಕದ ಕುಸ್ತಿಪಟು ಧರೆಪ್ಪ ಆರ್. ಹೊಸಮನಿ ಅವರು ವಿಶಾಖಪಟ್ಟಣದಲ್ಲಿ ನಡೆದ ರಾಷ್ಟ್ರೀಯ ಸೀನಿಯರ್ ಕುಸ್ತಿ ಚಾಂಪಿಯನ್‌ಷಿಪ್‌ನ ಗ್ರಿಕೊ ರೋಮನ್‌ ಶೈಲಿಯ 87 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಸೆಮಿಫೈನಲ್‌ ಪಂದ್ಯದಲ್ಲಿ ಧರೆಪ್ಪ ಅವರು ಸರ್ವೀಸಸ್‌ ಸ್ಪೋರ್ಟ್ಸ್‌ ಕಂಟ್ರೋಲ್‌ ಬೋರ್ಡ್‌ (ಎಸ್‌.ಎಸ್‌.ಸಿ.ಬಿ)ನ ಸುಶಾಂತ್‌ ವಿರುದ್ಧ 3–8ರಲ್ಲಿ ಪರಾಭವಗೊಂಡರು. ಬಳಿಕ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಧರೆಪ್ಪ ಅವರು ಜಾರ್ಖಂಡ್‌ನ ಅಶೋಕಕುಮಾರ್‌ ವಿರುದ್ಧ 10–2ರಲ್ಲಿ ಗೆಲ್ಲುವ ಮೂಲಕ ಕಂಚಿನ ಪದಕ ಜಯಿಸಿದರು. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನವರಾದ ಧರೆಪ್ಪ ಅವರು ಭಾರತೀಯ ಸೇನೆಯ ಯೋಧರಾಗಿದ್ದು, ಪುಣೆಯ ಸೇನಾ ಕ್ರೀಡಾ ಕೇಂದ್ರದಲ್ಲಿ ವಿನಾಯಕ ದಳವಿ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ. ಈ ಹಿಂದೆ ದಾವಣಗೆರೆ ಕ್ರೀಡಾ ವಸತಿ ಶಾಲೆಯಲ್ಲಿ ತರಬೇತುದಾರ ಆರ್‌. ಶಿವಾನಂದ ಅವರ ಬಳಿ ತರಬೇತಿ ಪಡೆದುಕೊಂಡಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.