ಹಿನ್ನೋಟ 2022 | ಅಥ್ಲೆಟಿಕ್ಸ್‌: ನೀರಜ್‌ ಚೋಪ್ರಾ ಹೊಳಪು ಜಾವೆಲಿನ್‌ ಥ್ರೋ ಸ್ಪರ್ಧಿ ನೀರಜ್‌ ಚೋಪ್ರಾ ಅವರ ಸಾಧನೆ ಈ ವರ್ಷವೂ ಭಾರತದ ಅಥ್ಲೆಟಿಕ್ಸ್‌ನಲ್ಲಿ ಸುದ್ದಿಮಾಡಿತು. ಚೋಪ್ರಾ ಅಲ್ಲದೆ ಲಾಂಗ್‌ಜಂಪರ್ ಮುರಳಿ ಶ್ರೀಶಂಕರ್‌, ಸ್ಟೀಪಲ್‌ ಚೇಸ್‌ನಲ್ಲಿ ಅವಿನಾಶ್‌ ಸಬ್ಳೆ ಅಂತರರಾಷ್ಟ್ರೀಯ ಕೂಟಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದರು. ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಕೂಟದಲ್ಲೂ ಭಾರತದ ಅಥ್ಲೀಟ್‌ಗಳು ಮಿಂಚಿದರು.ಕೆಲವು ಅಥ್ಲೀಟ್‌ಗಳು ಉದ್ದೀಪನಾ ಮದ್ದು ಸೇವಿಸಿ ಸಿಕ್ಕಿಬಿದ್ದದ್ದು ಕಪ್ಪುಚುಕ್ಕೆಯಾಗಿ ಪರಿಣಮಿಸಿತು. ‘ಪಯ್ಯೋಳಿ ಎಕ್ಸ್‌ಪ್ರೆಸ್‌’ ಖ್ಯಾತಿಯ ಪಿ.ಟಿ.ಉಷಾ ಐಒಎ ಅಧ್ಯಕ್ಷೆಯಾಗಿದ್ದು ಈ ವರ್ಷದ ಮತ್ತೊಂದು ಪ್ರಮುಖ ಬೆಳವಣಿಗೆ.‌ ‘ಡೈಮಂಡ್‌’ ಸಾಧನೆ 2021ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದ ನೀರಜ್‌ ಅವರು ಈ ವರ್ಷವೂ ಹಲವು ಪ್ರಥಮಗಳಿಗೆ ಕಾರಣರಾದರು. ಜುಲೈ ತಿಂಗಳಲ್ಲಿ ಅಮೆರಿಕದ ಒರೆಗಾನ್‌ನಲ್ಲಿ ನಡೆದಿದ್ದ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ 88.13 ಮೀಟರ್ಸ್ ಸಾಧನೆಯೊಂದಿಗೆ ಬೆಳ್ಳಿ ಗೆದ್ದುಕೊಂಡಿದ್ದರು. ಸ್ವಿಟ್ಜರ್‌ಲೆಂಡ್‌ನ ಜೂರಿಕ್‌ನಲ್ಲಿ ಸೆಪ್ಟೆಂಬರ್‌ನಲ್ಲಿ ನಡೆದ ಡೈಮಂಡ್‌ ಲೀಗ್‌ ಫೈನಲ್ಸ್‌ನಲ್ಲಿ ಗೆದ್ದು, ಈ ಸಾಧನೆ ಮಾಡಿದ ಭಾರತದ ಮೊದಲ ಅಥ್ಲೀಟ್‌ ಎನಿಸಿಕೊಂಡಿದ್ದರು. 2022 ರಲ್ಲಿ ಅವರು ಆರು ಬಾರಿ 88 ಮೀ. ಗಿಂತ ಹೆಚ್ಚು ದೂರ ಸಾಧನೆ ಮಾಡಿದ್ದಾರೆ. ಕಾಮನ್‌ವೆಲ್ತ್‌ ಕೂಟದಲ್ಲಿ ಪದಕ ಬೇಟೆ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಕೂಟದ ಅಥ್ಲೆಟಿಕ್ಸ್‌ನಲ್ಲಿ ಎಂಟು ಪದಕ ಜಯಿಸಿದ್ದು, ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಭಾರತದ ಶಕ್ತಿಯನ್ನು ಸಾಬೀತುಪಡಿಸಿತು. ಭಾರತ 1ಚಿನ್ನ, 4 ಬೆಳ್ಳಿ ಮತ್ತು 3 ಕಂಚು ಜಯಿಸಿತು. ನವದೆಹಲಿ ಕೂಟ ಹೊರತುಪಡಿಸಿದರೆ ಅಥ್ಲೆಟಿಕ್ಸ್‌ನಲ್ಲಿ ಭಾರತದ ಶ್ರೇಷ್ಠ ಸಾಧನೆ ಈ ಬಾರಿ ಮೂಡಿಬಂದಿತ್ತು. ಟ್ರಿಪಲ್‌ ಜಂಪ್‌ನಲ್ಲಿ ಎಲ್ದೋಸ್‌ ಪೌಲ್‌ ಮತ್ತು ಅಬ್ದುಲ್ಲಾ ಅಬೂಬಕರ್‌ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಜಯಿಸಿದ್ದರು. ಉಷಾ ಐಒಎ ಅಧ್ಯಕ್ಷೆ ದಿಗ್ಗಜ ಅಥ್ಲೀಟ್‌ ಪಿ.ಟಿ. ಉಷಾ ಅವರು ಭಾರತ ಒಲಿಂಪಿಕ್ ಸಂಸ್ಥೆಯ (ಐಒಎ) ಮೊದಲ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಡಿ.10 ರಂದು ನಡೆದಿದ್ದ ಐಒಎ ಚುನಾವಣೆಯಲ್ಲಿ ಅವರ ಅವಿರೋಧ ಆಯ್ಕೆ ನಡೆದಿತ್ತು. ಅಧ್ಯಕ್ಷ ಹುದ್ದೆಗೆ 58 ವರ್ಷದ ಉಷಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. 95 ವರ್ಷಗಳ ಇತಿಹಾಸವಿರುವ ಸಂಸ್ಥೆಯ ಅತ್ಯುನ್ನತ ಸ್ಥಾನಕ್ಕೆ ಆಯ್ಕೆಯಾಗಿರುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಅವರದ್ದಾಗಿದೆ. ಉದ್ದೀಪನಾ ಮದ್ದು ಸದ್ದು ‘ಉದ್ದೀಪನಾ ಮದ್ದು’ ಕರಿನೆರಳು ಈ ವರ್ಷವೂ ಭಾರತದ ಅಥ್ಲೆಟಿಕ್‌ ಕ್ಷೇತ್ರವನ್ನು ಕಾಡಿತು. ನಿಷೇಧಿತ ಮದ್ದು ಸೇವಿಸಿರುವುದು ಸಾಬೀತಾದ ಕಾರಣ ಕೆಲ ಪ್ರಮುಖ ಅಥ್ಲೀಟ್‌ಗಳು ಶಿಕ್ಷೆಗೆ ಗುರಿಯಾದರು. ಮಹಿಳಾ ಡಿಸ್ಕಸ್‌ ಥ್ರೋ ಸ್ಪರ್ಧಿಗಳಾದ ನವಜೀತ್‌ ಕೌರ್‌ ಧಿಲ್ಲೋನ್‌ ಮತ್ತು ಕಮಲ್‌ಪ್ರೀತ್‌ ಕೌರ್‌ ಅವರು ಮೂರು ವರ್ಷಗಳ ನಿಷೇಧ ಶಿಕ್ಷೆ ಹಾಗೂ ಅಥ್ಲೀಟ್‌ ಎಂ.ಆರ್‌.ಪೂವಮ್ಮ ಅವರು ಎರಡು ವರ್ಷಗಳ ನಿಷೇಧಕ್ಕೆ ಗುರಿಯಾಗಿದ್ಧಾರೆ. ಶೇಖರ್‌ ಧನಲಕ್ಷ್ಮಿ ಮತ್ತು ಐಶ್ವರ್ಯಾ ಬಾಬು ಅವರೂ ಉದ್ದೀಪನಾ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.