ಟಾಟಾ ಓಪನ್‌: ಹಿಂದೆ ಸರಿದ ಸಿಲಿಚ್ ಪುಣೆ : ಅಗ್ರಶ್ರೇಯಾಂಕದ ಆಟಗಾರ ಮರಿನ್ ಸಿಲಿಚ್‌ ಅವರು ಮಂಡಿ ನೋವಿನ ಕಾರಣ ಟಾಟಾ ಓಪನ್ ಮಹಾರಾಷ್ಟ್ರ ಟೆನಿಸ್‌ ಟೂರ್ನಿಯಿಂದ ಹಿಂದೆ ಸರಿದರು. 2014ರ ಅಮೆರಿಕ ಓಪನ್‌ ಚಾಂಪಿಯನ್‌ ಆಗಿರುವ ಸಿಲಿಚ್‌ ಅವರು ಕ್ವಾರ್ಟರ್‌ ಫೈನಲ್‌ನಲ್ಲಿ ಗುರುವಾರ ನೆದರ್ಲೆಂಡ್ಸ್‌ನ ಟಾಲೊನ್ ಗ್ರಿಕ್‌ಸ್ಪೂರ್‌ ಅವರನ್ನು ಎದುರಿಸಬೇಕಿತ್ತು. ಆದರೆ ಬೆಳಿಗ್ಗೆ ಅಭ್ಯಾಸದ ವೇಳೆ ಮಂಡಿನೋವಿಗೆ ಒಳಗಾದರು. ವಾಕ್ಓವರ್‌ ಪಡೆದ ಗ್ರಿಕ್‌ಸ್ಪೂರ್‌ ಸೆಮಿಫೈನಲ್‌ ಪ್ರವೇಶಿಸಿದರು. ‘ಅಭ್ಯಾಸದ ವೇಳೆ ಗಾಯಗೊಂಡಿದ್ದರಿಂದ ಟೂರ್ನಿಯಿಂದ ಹಿಂದೆ ಸರಿದಿದ್ದೇನೆ. ನನಗೆ ಬೆಂಬಲ ನೀಡಿದ ಇಲ್ಲಿನ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಇಲ್ಲಿ ಆಡುವುದನ್ನು ಅನಂದಿಸಿದ್ದೇನೆ. ಸಾಧ್ಯವಾದರೆ ಮುಂದಿನ ವರ್ಷ ಮತ್ತೆ ಭಾರತಕ್ಕೆ ಬರುವೆ’ ಎಂದು ಸಿಲಿಚ್‌ ಹೇಳಿದ್ದಾರೆ. ವಿಶ್ವ ರ್‍ಯಾಂಕಿಂಗ್‌ನಲ್ಲಿ 17ನೇ ಸ್ಥಾನದಲ್ಲಿರುವ ಸಿಲಿಚ್‌ ಅವರು ಬುಧವಾರ ನಡೆದಿದ್ದ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ 6–3, 3–6, 6–1 ರಲ್ಲಿ ಸ್ಪೇನ್‌ನ ರಾಬರ್ಟೊ ಕಾರ್ಬಲೆಸ್‌ ಬಯೆನಾ ವಿರುದ್ಧ ಗೆದ್ದಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.