8 ರಂದು ‘ಗ್ರೇಟ್‌ ಬೆಂಗಳೂರು 10ಕೆ’ ಬೆಂಗಳೂರು: ರಾಜ್ಯ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಿಂಪಿಕ್ ಸಂಸ್ಥೆ ಮತ್ತು ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಇದೇ ಮೊದಲ ಬಾರಿಗೆ ಜನವರಿ 8ರಂದು ‘ಗ್ರೇಟ್‌ ಬೆಂಗಳೂರು 10ಕೆ‘ ರನ್‌ ಆಯೋಜಿಸಲಾಗುತ್ತಿದೆ. ಕರ್ನಾಟಕ ಒಲಿಂಪಿಕ್‌ ಭವನದಲ್ಲಿ ಈ ಕುರಿತು ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಒಲಿಂಪಿಕ್ ಸಂಸ್ಥೆಯ (ಕೆಒಎ) ಅಧ್ಯಕ್ಷ ಕೆ. ಗೋವಿಂದರಾಜು ಈ ವಿಷಯ ತಿಳಿಸಿದರು. ‘10 ಕೆ, 5ಕೆ ಮತ್ತು ಫನ್‌ 3ಕೆ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಬೆಳಿಗ್ಗೆ 6.15ರಿಂದ 10ಕೆ, 7 ಗಂಟೆಯಿಂದ 5ಕೆ ಮತ್ತು 7.45ರಿಂದ 3ಕೆ ರನ್‌ ಆರಂಭವಾಗಲಿವೆ. ಕಂಠೀರವ ಕ್ರೀಡಾಂಗಣದಿಂದ ಸ್ಪರ್ಧೆಗಳು ಆರಂಭವಾದಲಿದ್ದು, ವಿಧಾನಸೌಧ, ಕಬ್ಬನ್ ಪಾರ್ಕ್‌ ಮತ್ತು ಎಂ.ಜಿ. ರಸ್ತೆಗಳ ಮೂಲಕ ಓಟಗಾರರು ಸಾಗಲಿದ್ದಾರೆ‘ ಎಂದು ಅವರು ಮಾಹಿತಿ ನೀಡಿದರು. ‘ಸ್ಪರ್ಧೆಗಳಿಗೆ ಈಗಾಗಲೇ 7,500 ಮಂದಿ ನೋಂದಾಯಿಸಿಕೊಂಡಿದ್ದಾರೆ. ಸ್ಪರ್ಧೆಗಳ ಮೂಲಕ ₹ 50 ಲಕ್ಷ ಸಂಗ್ರಹಿಸುವ ನಿರೀಕ್ಷೆಯಿದ್ದು, ಅದನ್ನು ಶಂಕರ ಕ್ಯಾನ್ಸರ್‌ ಫೌಂಡೇಷನ್‌ಗೆ ದೇಣಿಗೆಯಾಗಿ ನೀಡಲಾಗುವುದು. ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಗುವುದು‘ ಎಂದರು. ಕಂಠೀರವ ಕ್ರೀಡಾಂಗಣದಲ್ಲಿ ಇದೇ 6 ಮತ್ತು 7ರಂದು ನಡೆಯಲಿರುವ ಎಕ್ಸ್‌ಪೊದಲ್ಲಿ ಸ್ಪರ್ಧಿಗಳು ನೋಂದಾಯಿಸಬಹುದು. ಅಂಜು ಬಾಬಿ ಜಾರ್ಜ್‌ ಪ್ರಚಾರ ರಾಯಭಾರಿ: ಒಲಿಂಪಿಯನ್‌ ಅಥ್ಲೀಟ್‌ ಅಂಜು ಬಾಬಿ ಜಾರ್ಜ್‌ ಅವರು ಕೂಟದ ಪ್ರಚಾರ ರಾಯಭಾರಿಯಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ://.great10k. ಸಂಪರ್ಕಿಸಬಹುದು. ಕೆಒಎ ಪ್ರಧಾನ ಕಾರ್ಯದರ್ಶಿ ಟಿ. ಅನಂತರಾಜು, ಅಂಜು ಬಾಬಿ ಜಾರ್ಜ್‌, ಅಂತರರಾಷ್ಟ್ರೀಯ ಅಥ್ಲೀಟ್‌ ರೀತ್ ಅಬ್ರಹಾಂ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.