ಕುರುಕ್ಷೇತ್ರ ವಿವಿ ಉತ್ತಮ ಪ್ರದರ್ಶನ ಉಡುಪಿ: ಪೂರ್ಣಪ್ರಜ್ಞ ಕಾಲೇಜಿನಲ್ಲಿ ಬುಧವಾರ ಆರಂಭವಾದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಟ್ಟದ ಪುರುಷರ ವಾಲಿಬಾಲ್ ಟೂರ್ನಿಯಲ್ಲಿ ಹರ್ಯಾಣದ ಕುರುಕ್ಷೇತ್ರ ವಿವಿ ತಂಡವು ಪಶ್ಚಿಮ ಬಂಗಾಳದ ಅಡಮಸ್‌ ವಿವಿ ತಂಡವನ್ನು ಸೋಲಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು. ಟೂರ್ನಿಯ ಮೊದಲ ಪಂದ್ಯದಲ್ಲೇ ಅತ್ಯುತ್ತಮ ಪ್ರದರ್ಶನ ನೀಡಿದ ಕುರುಕ್ಷೇತ್ರ ವಿವಿಯ ಆಟಗಾರರು ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದರು. 25–11, 25–22 ಹಾಗೂ 25–23 ಅಂಕಗಳಿಂದ ಪಂದ್ಯ ಗೆದ್ದುಕೊಂಡರು. ನಂತರ ನಡೆದ ಪಂದ್ಯದಲ್ಲಿ ಚೆನ್ನೈನ ಮದ್ರಾಸ್‌ ವಿವಿ ರಾಜಸ್ತಾನ ವಿವಿ ವಿರುದ್ಧ ಜಯ ಸಾಧಿಸಿತು. ಎದುರಾಳಿ ತಂಡಕ್ಕೆ ಮೊದಲ ಸೆಟ್‌ (21–25) ಬಿಟ್ಟುಕೊಟ್ಟರೂ ನಂತರ 26–24, 25–23, 25–19ರಿಂದ ಗೆದ್ದು ಬೀಗಿತು. ತಮಿಳುನಾಡಿನ ಆರ್‌ಆರ್‌ಎಂ ಇನ್‌ಸ್ಟಿಟ್ಯೂಟ್ ಆಫ್‌ ಸೈನ್ಸ್‌ ಅಂಡ್ ಟೆಕ್ನಾಲಜಿ ವಿವಿಯು ರಾಜಸ್ತಾನದ ಕುಶಲದಾಸ್ ವಿವಿ ವಿರುದ್ಧ 25–17, 25–19, 25–17ರಿಂದ ಗೆಲುವು ಪಡೆಯಿತು. ಬಳಿಕ ನಡೆದ ಪಂದ್ಯದಲ್ಲಿ ವಾರಣಸಿಯ ಮಹಾತ್ಮಾಗಾಂಧಿ ಗಾಶಿ ವಿದ್ಯಾಪೀಠ ವಿವಿಯು ಅಮೃತ್‌ಸರದ ಗುರುನಾನಕ್ ದೇವ್ ವಿವಿಯನ್ನು 33–31, 25–22, 25–22ರಿಂದ ಮಣಿಸಿತು. ಭುವನೇಶ್ವರದ ಉಟ್ಕಲ್ ವಿವಿಯು 20–25, 25–19, 18–25, 25–20, 15–9ರಿಂದ ಹಿಮಾಚಲ ಪ್ರದೇಶ ವಿವಿಯನ್ನು ಸೋಲಿಸಿತು. ಭಾರಿ ಕೂತುಹಲ ಕೆರಳಿಸಿದ್ದ ಈ ಪಂದ್ಯದಲ್ಲಿ ಎರಡೂ ತಂಡಗಳು ಸಮಬಲ ಸಾಧಿಸಿದ್ದರಿಂದ ನಿರ್ಣಾಯಕ ಸೆಟ್‌ನಲ್ಲಿ 15–9ರಿಂದ ಉಟ್ಕಲ್ ವಿವಿ ಗೆಲುವು ತನ್ನದಾಗಿಸಿಕೊಂಡಿತು. 6ನೇ ಪಂದ್ಯದಲ್ಲಿ ಕೊಲ್ಕತ್ತಾದ ಕ್ಯಾಲಿಕಟ್‌ ವಿವಿಯು 25-20, 25-15, 26-24ರಿಂದ ಔರಂಗಾಬಾದ್‌ನ ಡಾ.ಬಿಎಎಂ ವಿವಿ ವಿರುದ್ದ ಜಯ ಸಾಧಿಸಿತು. ಜ8ರವರೆಗೆ ವಾಲಿಬಾಲ್ ಟೂರ್ನಿ ನಡೆಯುತ್ತಿದ್ದು ನಾಲ್ಕು ವಲಯಗಳಿಂದ ತಲಾ 4 ತಂಡಗಳಂತೆ 16 ತಂಡಗಳು ಪ್ರಶಸ್ತಿಗೆ ಸೆಣಸುತ್ತಿವೆ. ನಾಲ್ಕು ವಲಯಗಳಲ್ಲಿ ಅಗ್ರಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್‌ನಲ್ಲಿ ಆಡಲಿವೆ. ವಿಶ್ವ ಚಾಂಪಿಯನ್‌ಶಿಪ್‌ಗೆ ಭಾರತವನ್ನು ಪ್ರತಿನಿಧಿಸಲಿರುವ ತಂಡವನ್ನು ಈ ಟೂರ್ನಿಯಲ್ಲಿ ಆಯ್ಕೆ ಮಾಡಲಾಗುವುದು. ಜ.5ರಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್‌ ಕ್ರೀಡಾಪುಟಗಳಿಗೆ ಶುಭ ಹಾರೈಸಲಿದ್ದಾರೆ. ಜ.8ರಂದು ಸಂಜೆ 7ಕ್ಕೆ ಸಮಾರೋಪ ನಡೆಯಲಿದ್ದು, ಅದಮಾರು ಮಠದ ಯತಿಗಳಾದ ವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಈಶಪ್ರಿಯ ತೀರ್ಥ ಸ್ವಾಮೀಜಿ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವ ಶೋಭಾ ಕರಂದ್ಲಾಜೆ, ರಾಜ್ಯದ ಕ್ರೀಡಾಸಚಿವ ನಾರಾಯಣ ಗೌಡ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಕರ್ನಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ರಾವ್ ಭಾಗವಹಿಸಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.