ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಸೈನಾ ನೆಹ್ವಾಲ್‌, ಶ್ರೀಕಾಂತ್‌ಗೆ ನಿರಾಸೆ ಕ್ವಾಲಾಲಂಪುರ: ಭಾರತದ ಸೈನಾ ನೆಹ್ವಾಲ್ ಹಾಗೂ ಕಿದಂಬಿ ಶ್ರೀಕಾಂತ್ ಅವರು ಮಲೇಷ್ಯಾ ಓ‍ಪನ್ ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಸುತ್ತಿನಲ್ಲೇ ನಿರಾಸೆ ಅನುಭವಿಸಿದರು. ಮಂಗಳವಾರ ಇಲ್ಲಿ ಆರಂಭವಾದ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಸೈನಾ 12-21, 21-17, 12-21ರಿಂದ ಚೀನಾದ ಹಾನ್‌ ಯು ವಿರುದ್ಧ ಸೋಲು ಅನುಭವಿಸಿದರು. ಎರಡು ಬಾರಿಯ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್‌ ಸೈನಾ ಅವರು ಮೊದಲ ಗೇಮ್‌ ಕೈಚೆಲ್ಲಿದ ಬಳಿಕ ಪುಟಿದೆದ್ದು ಎರಡನೇ ಗೇಮ್‌ ತಮ್ಮದಾಗಿಸಿಕೊಂಡರು. ಆದರೆ ನಿರ್ಣಾಯಕ ಮೂರನೇ ಗೇಮ್‌ನಲ್ಲಿ ಮತ್ತೆ ಎಡವಿದರು. ಪುರುಷರ ಸಿಂಗಲ್ಸ್ ಮೊದಲ ಪಂದ್ಯದಲ್ಲಿ ಶ್ರೀಕಾಂತ್‌ 19-21, 14-21ರಿಂದ ಜಪಾನ್‌ನ ಕೆಂಟಾ ನಿಶಿಮೊಟೊ ಎದುರು ಸೋಲು ಕಂಡರು. ಈ ಹಿಂದೆ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಶ್ರೀಕಾಂತ್‌ 42 ನಿಮಿಷಗಳ ಪೈಪೋಟಿಯಲ್ಲಿ ಶ್ರೇಯಾಂಕರಹಿತ ಆಟಗಾರನ ಎದುರು ಸೋಲೊಪ್ಪಿಕೊಂಡರು. ವಿಶ್ವ ರ‍್ಯಾಂಕಿಂಗ್‌ನಲ್ಲಿ 13ನೇ ಸ್ಥಾನದಲ್ಲಿರುವ ಶ್ರೀಕಾಂತ್‌ ಮೊದಲ ಗೇಮ್‌ನಲ್ಲಿ ತೀವ್ರ ಸ್ಪರ್ಧೆಯೊಡ್ಡಿದರು. ಎರಡನೇ ಗೇಮ್‌ನಲ್ಲೂ ಒಂದು ಹಂತದಲ್ಲಿ 12–12ರಿಂದ ಸಮಬಲ ಸಾಧಿಸಿದ್ದರು. ಆದರೆ ಆ ಬಳಿಕ ನಿಶಿಮೊಟೊ ಪಾರಮ್ಯ ಮೆರೆದರು. ಆಕರ್ಷಿ ಕಶ್ಯಪ್ ಅವರ ಅಭಿಯಾನವೂ ಮೊದಲ ಸುತ್ತಿನಲ್ಲೇ ಅಂತ್ಯವಾಯಿತು. ಮಹಿಳಾ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಅವರು 10-21, 8-21ರಿಂದ ಚೀನಾ ತೈಪೆಯ ವೆನ್‌ ಚಿ ಸು ಎದುರು ಸೋಲು ಅನುಭವಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.