ಜ.22ರಿಂದ ಸುತ್ತೂರು ಜಾತ್ರೆ ಕುಸ್ತಿ ಮೈಸೂರು: ಜಿಲ್ಲೆಯ ಸುತ್ತೂರು ಕ್ಷೇತ್ರದಲ್ಲಿ ನಡೆಯುವ ಜಾತ್ರೆ ಅಂಗವಾಗಿ ಇದೇ 22ರಿಂದ ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆ ಆಯೋಜಿಸಲಾಗಿದೆ. ‘ಸುತ್ತೂರು ಕೇಸರಿ’ ಹಾಗೂ ‘ಸುತ್ತೂರು ಕುಮಾರ’ ಪ್ರಶಸ್ತಿಗಳಿಗಾಗಿ 60 ಜೋಡಿಗಳು ಸೆಣೆಸಾಡಲಿವೆ. ಇಲ್ಲಿನ ಸುತ್ತೂರು ಶಾಖಾ ಮಠದಲ್ಲಿ ಶುಕ್ರವಾರ ಸ್ಪರ್ಧೆಯ ಪೋಸ್ಟರ್‌ ಬಿಡುಗಡೆ ಮಾಡಿದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ವಿವರ ನೀಡಿದರು. ‘ಎಂಟು ವರ್ಷ ವಯಸ್ಸಿನ ಕುಸ್ತಿಪಟುಗಳಿಂದ 40 ವರ್ಷದ ಪೈಲ್ವಾನ್‌ಗಳವರೆಗೂ ಅವಕಾಶ ಕಲ್ಪಿಸಲಾಗಿದೆ. ಬಾಲಕರ ವಿಭಾಗದ ಕುಸ್ತಿ ಸಾಂಕೇತಿಕವಾಗಿರುತ್ತದೆ. ಪೈಲ್ವಾನ್ ಪ್ರಹ್ಲಾದ್‌ ಕುಸ್ತಿ ಜ್ಯೋತಿ ತರಲಿದ್ದಾರೆ. ಹರಿಯಾಣದ ಹೆಸರಾಂತ ಪೈಲ್ವಾನ್‌ ಬಂಟಿ ಕುಮಾರ್ ಮತ್ತು ಬೆಳಗಾವಿಯ ಪೈಲ್ವಾನ್ ನಾಗರಾಜು ನಡುವೆ ಮಾರ್ಫಿಟ್ ಕುಸ್ತಿ ನಡೆಯಲಿದೆ. ಗೆದ್ದವರಿಗೆ ‘ಸುತ್ತೂರು ಕೇಸರಿ’ ಪ್ರಶಸ್ತಿ ಲಭಿಸಲಿದೆ. ರಮ್ಮನಹಳ್ಳಿಯ ಪೈಲ್ವಾನ್‌ ರವಿ ಮತ್ತು ಶ್ರೀರಂಗಪ‍ಟ್ಟಣದ ಪೈಲ್ವಾನ್‌ ಮಂಜು (ಟಗರು) ಮಧ್ಯೆ ಸುತ್ತೂರು ಕುಮಾರ ಪ್ರಶಸ್ತಿಗಾಗಿ ಸೆಣೆಸಾಟ ನಡೆಯಲಿದೆ’ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.