ಆರೋಪ ಆಧಾರರಹಿತ, ಸುಳ್ಳು: ಸರ್ಕಾರದ ನೋಟಿಸ್‌ಗೆ ಕುಸ್ತಿ ಫೆಡರೇಷನ್ ಉತ್ತರ ನವದಹೆಲಿ: ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ಮಾಡಿರುವ ಎಲ್ಲ ಆರೋಪಗಳನ್ನು ಭಾರತ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ) ತಳ್ಳಿಹಾಕಿದೆ. ಕುಸ್ತಿಪಟುಗಳ ಆರೋಪಗಳಿಗೆ ಉತ್ತರಿಸಲು ಸರ್ಕಾರವು, ಡಬ್ಲ್ಯುಎಫ್‌ಐಗೆ 72 ಗಂಟೆಗಳ ಗಡುವು ವಿಧಿಸಿತ್ತು. ಫೆಡರೇಷನ್‌ ಶುಕ್ರವಾರ ಸಂಜೆ ಸರ್ಕಾರಕ್ಕೆ ತನ್ನ ಉತ್ತರ ನೀಡಿದೆ. ‘ಡಬ್ಲ್ಯುಎಫ್‌ಐ ಆಡಳಿತವನ್ನು ಚುನಾಯಿತ ಪ್ರತಿನಿಧಿಗಳು ನೋಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಅಧ್ಯಕ್ಷರು ಒಳಗೊಂಡಂತೆ ಯಾವುದೇ ವ್ಯಕ್ತಿಗೂ ಫೆಡರೇಷನ್‌ನಲ್ಲಿ ಸರ್ವಾಧಿಕಾರಿಯಂತೆ ವರ್ತಿಸಲು ಅಥವಾ ಅಧಿಕಾರ ದುರುಪಯೋಗಪಡಿಸಲು ಅವಕಾಶವಿಲ್ಲ‘ ಎಂದು ಹೇಳಿದೆ. ‘ಕುಸ್ತಿಪಟುಗಳು ಮಾಡಿರುವ ಆರೋಪಗಳು ಆಧಾರರಹಿತ ಮತ್ತು ಸುಳ್ಳು. ಫೆಡರೇಷನ್‌ನ ಅಧ್ಯಕ್ಷರು ಹಾಗೂ ಕೋಚ್‌ಗಳಿಗೆ ಮಾನಹಾನಿ ಮಾಡುವ ಉದ್ದೇಶ ಇದರ ಹಿಂದಿದೆ. ಹಾಲಿ ಆಡಳಿತ ಮಾಡಿರುವ ಉತ್ತಮ ಕೆಲಸಗಳಿಗೆ ಮಸಿ ಬಳಿಯಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮಾಡಿರುವ ಹುನ್ನಾರ ಇದು. ಕುಸ್ತಿಪಟುಗಳು ಯಾರದೋ ಒತ್ತಡಕ್ಕೆ ಮಣಿದು ಪ್ರತಿಭಟನೆ ನಡೆಸಿದ್ದಾರೆ’ ಎಂದಿದೆ. ಸಮಿತಿಗೆ ದೂರು ನೀಡಿಲ್ಲ: ‘ಲೈಂಗಿಕ ದೌರ್ಜನ್ಯದ ವಿರುದ್ಧ ದೂರು ನೀಡಲು ಐವರು ಸದಸ್ಯರ ಸಮಿತಿ ಯನ್ನು ಫೆಡರೇಷನ್‌ ಹೊಂದಿದೆ. ಫೆಡರೇಷನ್‌ನ ಕಾರ್ಯದರ್ಶಿ ವಿ.ಎನ್‌.ಪ್ರಸೂದ್‌ ಅವರು ಸಮಿತಿಯ ಮುಖ್ಯಸ್ಥರಾಗಿದ್ದು, ಸಾಕ್ಷಿ ಮಲಿಕ್‌ ಸದಸ್ಯರಾಗಿದ್ದಾರೆ’ ಎಂಬ ವಿಷಯವನ್ನು ಸರ್ಕಾರದ ಗಮನಕ್ಕೆ ತಂದಿದೆ. ‘ಯಾವುದೇ ದೂರುಗಳು ಇದ್ದರೆ ಅದನ್ನು ಸಮಿತಿ ಮುಂದೆ ಇಡಬಹುದು. ಸಮಿತಿಯು ನಿಯಮಾವಳಿ ಪ್ರಕಾರ ತನಿಖೆ ನಡೆಸುತ್ತದೆ. ಆದರೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕುಸ್ತಿಪಟುಗಳಲ್ಲಿ ಯಾರಿಂದಲೂ ಅಂತಹ ದೂರು ಸಮಿತಿ ಮುಂದೆ ಬಂದಿಲ್ಲ’ ಎಂದು ಹೇಳಿದೆ. ಸಮಿತಿ ಸದಸ್ಯರ ಹೆಸರು ಇಂದು ಪ್ರಕಟ ಡಬ್ಲ್ಯುಎಫ್‌ಐ ಆಡಳಿತ ನೋಡಿಕೊಳ್ಳಲು ಮತ್ತು ಅಧ್ಯಕ್ಷರ ಮೇಲಿನ ಆರೋಪಗಳ ಬಗ್ಗೆ ತನಿಖೆಗೆ ಕ್ರೀಡಾ ಸಚಿವಾಲಯ ನೇಮಿಸಿರುವ ಮೇಲುಸ್ತುವಾರಿ ಸಮಿತಿ ಸದಸ್ಯರ ಹೆಸರನ್ನು ಭಾನುವಾರ ಪ್ರಕಟಿಸಲಾಗುವುದು ಎಂದು ಸಚಿವಾಲಯದ ಮೂಲಗಳು ತಿಳಿಸಿವೆ. ಮೂವರು ಸದಸ್ಯರ ಮೇಲುಸ್ತುವಾರಿ/ ತನಿಖಾ ಸಮಿತಿ ರಚನೆ ಸಂಬಂಧ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌, ಸಚಿವಾಲಯದ ಕಾರ್ಯದರ್ಶಿ ಸುಜಾತಾ ಚತುರ್ವೇದಿ ಮತ್ತು ಸಾಯ್ ನಿರ್ದೇಶಕ ಸಂದೀಪ್‌ ಪ್ರಧಾನ್‌ ಅವರು ಶನಿವಾರ ಸಭೆ ನಡೆಸಿದರು ಎಂದು ಮೂಲಗಳು ಹೇಳಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.