ಬ್ಯಾಡ್ಮಿಂಟನ್‌| ಕ್ವಾರ್ಟರ್‌ ಫೈನಲ್‌ಗೆ ಲಕ್ಷ್ಯ ಸೇನ್: ಸೈನಾ ನೆಹ್ವಾಲ್‌ಗೆ ನಿರಾಸ ಜಕಾರ್ತ: ಚುರುಕಿನ ಆಟವಾಡಿದ ಲಕ್ಷ್ಯ ಸೇನ್‌ ಅವರು ಇಂಡೋನೇಷ್ಯಾ ಮಾಸ್ಟರ್ಸ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್ ಪ್ರವೇಶಿಸಿದರು. ಗುರುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ 16ರ ಘಟ್ಟದ ಪಂದ್ಯದಲ್ಲಿ ಅವರು 19–21, 21–8, 21–17 ರಲ್ಲಿ ಮಲೇಷ್ಯಾದ ಎಂಗ್‌ ತ್ಸೆ ಯೊಂಗ್‌ ವಿರುದ್ಧ ಗೆದ್ದರು. ಮೊದಲ ಗೇಮ್‌ನಲ್ಲಿ ಸೋತರೂ ಪುಟಿದೆದ್ದು ನಿಲ್ಲುವಲ್ಲಿ ಸೇನ್‌ ಯಶಸ್ವಿಯಾದರು. ಸೇನ್‌, ಶುಕ್ರವಾರ ನಡೆಯಲಿರುವ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಇಂಡೊನೇಷ್ಯಾದ ಜೊನಾಥನ್‌ ಕ್ರಿಸ್ಟಿ ವಿರುದ್ಧ ಸೆಣಸುವರು. ಕ್ರಿಸ್ಟಿ ಅವರು ಇನ್ನೊಂದು ಪಂದ್ಯದಲ್ಲಿ 21–16, 21–15 ರಲ್ಲಿ ತಮ್ಮದೇ ದೇಶದ ಶೆಸರ್‌ ಹಿರೆನ್‌ ರುಸ್ತವಿಟೊ ಅವರನ್ನು ಸೋಲಿಸಿದರು. ಸೈನಾ ನೆಹ್ವಾಲ್‌ಗೆ ನಿರಾಸೆ: ಅನುಭವಿ ಆಟಗಾರ್ತಿ ಸೈನಾ ನೆಹ್ವಾಲ್‌ ಅವರು ಮಹಿಳೆಯರ ಸಿಂಗಲ್ಸ್‌ ವಿಭಾಗದ 16ರ ಘಟ್ಟದಲ್ಲಿ ಸೋತು ಹೊರಬಿದ್ದರು. ಚೀನಾದ ಯು ಹಾನ್‌ 21–15, 21–7 ರಲ್ಲಿ ಸೈನಾ ಅವರನ್ನು ಮಣಿಸಿದರು. ಮೊದಲ ಗೇಮ್‌ನಲ್ಲಿ ಎದುರಾಳಿಗೆ ಅಲ್ಪ ಪೈಪೋಟಿ ಒಡ್ಡಿದ ಭಾರತದ ಆಟಗಾರ್ತಿ, ಎರಡನೇ ಗೇಮ್‌ನಲ್ಲಿ ವೈಫಲ್ಯ ಅನುಭವಿಸಿದರು. ಅಶ್ವಿನಿ ಪೊನ್ನಪ್ಪ ಮತ್ತು ತನಿಷಾ ಕ್ರಾಸ್ತೊ ಮಹಿಳೆಯರ ಡಬಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. ಭಾರತದ ಜೋಡಿ 19–21, 21–18, 23–21 ರಲ್ಲಿ ಇಂಡೊನೇಷ್ಯಾದ ಲ್ಯಾನಿ ತ್ರಿಯಾ ಮಯಸರಿ ಮತ್ತು ರಿಬಕಾ ಸುಗಿಯಾರ್ತೊ ಎದುರು ರೋಚವಾಗಿ ಗೆದ್ದಿತು. ಈ ಜಿದ್ದಾಜಿದ್ದಿನ ಹೋರಾಟ 1 ಗಂಟೆ 3 ನಿಮಿಷ ನಡೆಯಿತು. ಎಚ್‌.ಎಸ್‌.ಪ್ರಣಯ್‌ ಅವರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನಲ್ಲಿ ಸೋತಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.