ಮೈಕ್ ಟೈಸನ್‌ ಮೇಲೆ ಅತ್ಯಾಚಾರ ಆರೋಪ ನ್ಯೂಯಾರ್ಕ್: ಹೆವಿವೇಟ್‌ ಬಾಕ್ಸಿಂಗ್‌ ಕ್ರೀಡೆಯ ಮಾಜಿ ಚಾಂಪಿಯನ್ ಮೈಕ್ ಟೈಸನ್ ಅವರು ತಮ್ಮ ಮೇಲೆ 1990ರಲ್ಲಿ ಅತ್ಯಾಚಾರವೆಸಗಿದ್ದರು ಎಂದು ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ. ₹ 40 ಕೋಟಿಯ ಪರಿಹಾರವನ್ನೂ ಕೊಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ‘ಅಲ್ಬಾನಿಯ ನೈಟ್‌ ಕ್ಲಬ್‌ನಲ್ಲಿ ಟೈಸನ್‌ ಅವರನ್ನು ಭೇಟಿ ಮಾಡಿದ್ದೆ. ಲಿಮೊಸಿನ್ ಕಾರಿನಲ್ಲಿ ತಮ್ಮ ಮೇಲೆ ಅತ್ಯಾಚಾರವೆಸಗಿದ್ದರು. ಅದರಿಂದಾಗಿ ದೈಹಿಕ ಹಾಗೂ ಮಾನಸಿಕವಾಗಿ ನಾನು ಅಪಾರವಾಗಿ ಘಾಸಿಗೊಂಡಿದ್ದೇನೆ’ ಎಂದು ಅವರೂ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಅಮೆರಿಕದ ಅಡಲ್ಟ್‌ ಸರ್ವೈವರ್ಸ್‌ ಕಾಯಿದೆಯಡಿಯಲ್ಲಿ ‍ಪ್ರಕರಣವನ್ನು ದಾಖಲಿಸಲಾಗಿದೆ. ‘ಲಿಮೊಸಿನ್ ಕಾರ್‌ನಲ್ಲಿ ಕುಳಿತಿದ್ದಾಗಲೇ ಟೈಸನ್ ನನ್ನ ಮೈಕೈ ಮುಟ್ಟಿ ಅಸಭ್ಯವಾಗಿ ವರ್ತಿಸಲು ಆರಂಭಿಸಿದರು. ನಾನು ವಿರೋಧಿಸಿದೆ. ಎಚ್ಚರಿಕೆಯನ್ನೂ ಕೊಟ್ಟೆ. ಆದರೂ ಅವರು ನನ್ನ ಮೇಲೆ ದಾಳಿಯನ್ನು ಮುಂದುವರಿಸಿದರು. ನನ್ನನ್ನು ವಿವಸ್ತ್ರಗೊಳಿಸಿ ಅತ್ಯಾಚಾರವೆಸಗಿದರು’ ಎಂದು ದೂರಿದ್ದಾರೆ. ಟೈಸನ್ 1992ರಲ್ಲಿ ವಾಷಿಂಗ್ಟ್‌ನಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಈಗಾಗಲೇ ಶಿಕ್ಷೆ ಅನುಭವಿಸಿದ್ದಾರೆ. ಈಗ ಮತ್ತೊಂದು ಪ್ರಕರಣದಲ್ಲಿ ಅವರು ಆರೋಪಿಯಾಗಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.