ಖೇಲೊ ಇಂಡಿಯಾ ಕ್ರೀಡಾಕೂಟ | ಈಜು ಸ್ಪರ್ಧೆಯಲ್ಲಿ ಶಾಲಿನಿ ಮಿಂಚು, ಎರಡು ಬೆಳ್ಳಿ ಪದಕ ಬೆಂಗಳೂರು: ಕರ್ನಾಟಕದ ಶಾಲಿನಿ ಆರ್‌. ದೀಕ್ಷಿತ್ ಅವರು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆಯುತ್ತಿರುವ ಖೇಲೊ ಇಂಡಿಯಾ ಯೂತ್ ಕ್ರೀಡಾಕೂಟದ ಈಜು ಸ್ಪರ್ಧೆಯಲ್ಲಿ ಎರಡು ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಶುಕ್ರವಾರ ನಡೆದ ಮಹಿಳೆಯರ 200 ಮೀಟರ್ಸ್ ಬ್ಯಾಕ್‌ಸ್ಟ್ರೋಕ್ ವಿಭಾಗದಲ್ಲಿ ಶಾಲಿನಿ 2 ನಿಮಿಷ 26.70 ಸೆಕೆಂಡುಗಳಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಪಡೆದರು. ಈ ವಿಭಾಗದಲ್ಲಿ ಮಹಾರಾಷ್ಟ್ರದ ಪಲಕ್ ಜೋಷಿ (2 ನಿ. 24.02 ಸೆ.) ಚಿನ್ನ ಗೆದ್ದರು. ಮಹಿಳೆಯರ 4X100 ಮೀ. ಮೆಡ್ಲೆಯಲ್ಲಿ ಶಾಲಿನಿ, ಹಾಷಿಕಾ ರಾಮಚಂದ್ರ, ಎಸ್‌. ಲಾಕ್ಷ್ಯಾ ಮತ್ತು ಧೀನಿಧಿ ದೇಶಿಂಗು ಅವರನ್ನೊಳಗೊಂಡ ಕರ್ನಾಟಕ ತಂಡ (4 ನಿ. 31.97 ಸೆ.) ಬೆಳ್ಳಿ ಪದಕ ಜಯಿಸಿತು. ಮಹಾರಾಷ್ಟ್ರ (4 ನಿ. 30.42 ಸೆ.) ಚಿನ್ನ ತನ್ನದಾಗಿಸಿಕೊಂಡಿತು. ಮಹಿಳೆಯರ 200 ಮೀ. ಮೆಡ್ಲೆಯಲ್ಲಿ ಕರ್ನಾಟಕದ ಮಾನವಿ ವರ್ಮಾ (2 ನಿ. 25.90 ಸೆ.) ಬೆಳ್ಳಿ ಮತ್ತು ವಿಹಿತಾ ನಯನಾ (2 ನಿ. 28.44 ಸೆ.) ಕಂಚು ಜಯಿಸಿದರು. ಈ ವಿಭಾಗದ ಚಿನ್ನವು ಮಹಾರಾಷ್ಟ್ರದ ಅಪೇಕ್ಷಾ ಫರ್ನಾಂಡಿಸ್‌ (2 ನಿ. 24.91 ಸೆ.) ಅವರ ಪಾಲಾಯಿತು. ಕೂಟದ ಈಜುಸ್ಪರ್ಧೆಗಳಲ್ಲಿ ಒಟ್ಟು 21 ಪದಕ (6 ಚಿನ್ನ, 9 ಬೆಳ್ಳಿ ಮತ್ತು 6 ಕಂಚು) ಗೆದ್ದಿರುವ ಕರ್ನಾಟಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.