ಎಲೊರ್ಡಾ ಕಪ್‌ ಬಾಕ್ಸಿಂಗ್‌: ಭಾರತಕ್ಕೆ 3 ಕಂಚು, ಸೆಮಿಫೈನಲ್‌ಗೆ ವಿಜಯಕುಮಾರ್ ಅಸ್ತಾನಾ: ಭಾರತ ವಿಜಯ ಕುಮಾರ್ ಅವರು ದಿಟ್ಟ ಹೋರಾಟ ನಡೆಸಿ ಕಜಕಸ್ತಾನದ ಝೋಲ್ಡಾಸ್‌ ಝೆನಿಸ್ಸೋವ್ ಅವರನ್ನು ಸೋಲಿಸಿ ಎಲೊರ್ಡಾ ಕಪ್‌ ಬಾಕ್ಸಿಂಗ್ ಟೂರ್ನಿಯ ಸೆಮಿಫೈನಲ್ ತಲುಪಿದರು. 60 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಅವರು 3:2 ಭಿನ್ನತೀರ್ಪಿನ ಆಧಾರದಲ್ಲಿ ಜಯಗಳಿಸಿದರು. ಶನಿವಾರ ನಡೆಯುವ ಸೆಮಿಫೈನಲ್‌ನಲ್ಲಿ ಅವರು ಕಜಕಸ್ತಾನದ ಬೆಕನೂರ್ ಒಝನೋವ್ ಅವರನ್ನು ಎದುರಿಸಲಿದ್ದಾರೆ. ಶುಕ್ರವಾರ ಭಾರತದ ಕೀಷಮ್ ಸಂಜಿತ್‌ ಸಿಂಗ್‌ (48 ಕೆ.ಜಿ ವಿಭಾಗ), ಸುಮಿತ್‌ (86 ಕೆ.ಜಿ) ಮತ್ತು ನೀಮಾ (63 ಕೆ.ಜಿ ವಿಭಾಗ) ಕಂಚಿನ ಪದಕ ಗೆದ್ದುಕೊಂಡರು. ಭಾರತದ ಕೀಷಮ್ ಸಂಜಿತ್ ಸಿಂಗ್‌ (48 ಕೆ.ಜಿ) ಮತ್ತು ಸುಮಿತ್‌ (86 ಕೆ.ಜಿ), ಕೊನೆಗಳಿಗೆಯಲ್ಲಿ ಕಾರ್ಯಕ್ರಮ ಪಟ್ಟಿ ಬದಲಾದ ಪರಿಸ್ಥಿತಿಯಲ್ಲಿ ದುರದೃಷ್ಟವಶಾತ್‌ ತಮ್ಮ ಸೆಮಿಫೈನಲ್‌ ಎದುರಾಳಿಗಳಿಗೆ ವಾಕ್‌ ಒವರ್‌ ನೀಡಬೇಕಾಯಿತು. ಭಾರತ ಬಾಕ್ಸಿಂಗ್‌ ಫೆಡರೇಷನ್‌ ಇದರ ವಿರುದ್ಧ ಕಜಕಸ್ತಾನ ಬಾಕ್ಸಿಂಗ್‌ ಫೆಡರೇಷನ್‌ಗೆ ದೂರು ಸಲ್ಲಿಸಿದೆ. ನೀಮಾ (63 ಕೆ.ಜಿ), ಸೆಮಿಫೈನಲ್‌ನಲ್ಲಿ ಲಾರಾ ಯೆಸೆ್ಸನ್‌ಕೆಲ್ಡಿ (ಕಜಕಸ್ತಾನ) ಎದುರು ಸೋಲನುಭವಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.