ಭಾರತ ಬಾಕ್ಸಿಂಗ್‌ ತಂಡಕ್ಕೆ ದಿಮಿತ್ರಿ ಕೋಚ್ ನವದೆಹಲಿ (ಪಿಟಿಐ): ಪ್ರಮುಖ ಬಾಕ್ಸಿಂಗ್‌ ಕೋಚ್‌ ದಿಮಿತ್ರಿ ದಿಮಿತ್ರಕ್ ಅವರನ್ನು ಭಾರತ ಬಾಕ್ಸಿಂಗ್‌ ಫೆಡರೇಷನ್‌ (ಬಿಎಫ್‌ಐ) ಮುಂದಿನ ಎರಡು ವರ್ಷಗಳ ಅವಧಿಗೆ ಭಾರತ ತಂಡದ ವಿದೇಶಿ ಕೋಚ್‌ ಆಗಿ ನೇಮಕ ಮಾಡಿದೆ. ಐರ್ಲೆಂಡ್‌ ಬಾಕ್ಸಿಂಗ್‌ ಸಂಸ್ಥೆ ಮತ್ತು ಐರ್ಲೆಂಡ್‌ನ ಜೂನಿಯರ್‌ ಹಾಗೂ ಯೂತ್‌ ತಂಡಗಳಿಗೆ ಕಳೆದ 12 ವರ್ಷಗಳಿಂದ ಕೋಚ್ ಆಗಿದ್ದ ದಿಮಿತ್ರಿ, ಭಾರತದ ಪುರುಷ ಮತ್ತು ಮಹಿಳಾ ತಂಡಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ. ವಿಶ್ವಚಾಂಪಿಯನ್‌ಷಿಪ್‌ ಒಳಗೊಂಡಂತೆ ಮುಂಬರುವ ಪ್ರಮುಖ ಕೂಟಗಳನ್ನು ಗಮನದಲ್ಲಿಟ್ಟುಕೊಂಡು, ಬಿಎಫ್‌ಐ ಅವರನ್ನು ನೇಮಿಸಿಕೊಂಡಿದೆ. ‘ಈಚೆಗಿನ ಕೆಲ ವರ್ಷಗಳಿಂದ ಭಾರತವು ಬಾಕ್ಸಿಂಗ್‌ನ ಪ್ರಮುಖ ಶಕ್ತಿಯಾಗಿ ಬೆಳೆಯುತ್ತಿದೆ. ಯುವ ಹಾಗೂ ಪ್ರತಿಭಾನ್ವಿತ ಬಾಕ್ಸರ್‌ಗಳನ್ನು ಒಳಗೊಂಡಿರುವ ತಂಡಕ್ಕೆ ತರಬೇತಿ ನೀಡುವ ಅವಕಾಶ ಲಭಿಸಿದ್ದು ಸಂತಸ ಉಂಟುಮಾಡಿದೆ’ ಎಂದು 47 ವರ್ಷದ ದಿಮಿತ್ರಿ ಪ್ರತಿಕ್ರಿಯಿಸಿದ್ದಾರೆ. 'ವೃತ್ತಿಜೀವನದಲ್ಲಿ ಪಡೆದ ಅನುಭವದ ನೆರವಿನಿಂದ ಮುಂದಿನ ಚಾಂಪಿಯನ್‌ಷಿಪ್‌ಗಳಲ್ಲಿ ನಮಗೆ ಯಶಸ್ಸು ಸಾಧಿಸುವ ವಿಶ್ವಾಸ ಹೊಂದಿದ್ದೇನೆ’ ಎಂದರು. ಐರ್ಲೆಂಡ್‌ ಬಾಕ್ಸರ್‌ಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತೆ ಮಾಡುವಲ್ಲಿ ದಿಮಿತ್ರ ಅವರ ಪಾತ್ರ ಹಿರಿದು. ಜೋ ವಾರ್ಡ್‌ ಅವರಂತಹ ಬಾಕ್ಸರ್‌ಗಳಿಗೆ ತರಬೇತಿ ನೀಡಿದ್ದಾರೆ. ವಾರ್ಡ್‌ ಅವರು 2015 ಮತ್ತು 2017ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.