ಪ್ಯಾರಿಸ್ ಒಲಿಂಪಿಕ್ಸ್–2024: ದುಬಾರಿ ಟಿಕೆಟ್ ದರ ಪ್ಯಾರಿಸ್‌ (ಫ್ರಾನ್ಸ್): ಜಗತ್ತಿನ ಅತಿ ದೊಡ್ಡ ಕ್ರೀಡಾಕೂಟವೆನಿಸಿರುವ ‘ಒಲಿಂಪಿಕ್ಸ್‘ ಮುಂದಿನ ವರ್ಷ ಫ್ರಾನ್ಸ್‌ನಲ್ಲಿ ನಡೆಯಲಿರುವ ಹಿನ್ನೆಲೆ ಟಿಕೆಟ್ ಮಾರಾಟ ಈಗಾಗಲೇ ಆರಂಭವಾಗಿದೆ. ಕ್ರೀಡಾಕೂಟವನ್ನು ಹೆಚ್ಚು ಜನ ವೀಕ್ಷಿಸಲೆಂದು ಸಂಘಟಕರು ವಿವಿಧ ರೀತಿಯ ದರದಲ್ಲಿ ಟಿಕೆಟ್ ಮಾರಾಟ ಮಾಡುತ್ತಿದ್ದಾರೆ. ಒಲಿಂಪಿಕ್ಸ್‌ಗೆ ಕ್ರೀಡಾಪ್ರೇಮಿಗಳ ಸೆಳೆಯುವ ಉದ್ದೇಶದಿಂದ ಕೆಲವು ಕ್ರೀಡೆಗಳ ವೀಕ್ಷಣೆಗೆ ಕೈಗೆಟುಕುವ ದರದಲ್ಲಿ ಟಿಕೆಟ್ ಸಿಗುತ್ತದೆ ಎಂದು ಸಂಘಟಕರು ಹೇಳಿದರೂ ಆನ್‌ಲೈನ್ ವೇದಿಕೆಯಲ್ಲಿ ನಡೆಯುತ್ತಿರುವ ಟಿಕೆಟ್‌ಗಳು ಮಾರಾಟದ ಬಗ್ಗೆ ಜನರು ಮುನಿಸಿಕೊಂಡಿರುವುದು ಕಂಡುಬರುತ್ತಿದೆ. ತಿಂಗಳ ಆರಂಭದಲ್ಲಿ ಮೊದಲ ಸುತ್ತಿನ ಟಿಕೆಟ್ ಮಾರಾಟ ಅಷ್ಟೊಂದು ಬಿರುಸಿನಿಂದ ಕೂಡಿರಲಿಲ್ಲ. ಟಿಕೆಟ್‌ಗಾಗಿ ಬಂದ ಒಂದು ಕೋಟಿ ಅಹವಾಲುಗಳಲ್ಲಿ 30 ಲಕ್ಷ ಜನರಿಗಷ್ಟೇ ಅದೃಷ್ಟದ ಆಯ್ಕೆ ಮಾಡುವುದರ ಮೂಲಕ ಟಿಕೆಟ್ ನೀಡಲಾಯಿತು. ಆದರೆ, ಟಿಕೆಟ್ ಪಡೆದ ಅದೃಷ್ಟಶಾಲಿಗಳು ಸಿಟ್ಟುಗೊಂಡಿದ್ದಾರೆ. ‘ಆನ್‌ಲೈನ್‌ನಲ್ಲಿ 48 ಗಂಟೆಗಳ ಅವಧಿಯೊಳಗೆ ಟಿಕೆಟ್ ಪಡೆಯಲು ಅವಕಾಶ ನೀಡಲಾಗಿದೆ. ಕೆಲವು ಕ್ರೀಡೆಗಳ ವೀಕ್ಷಣೆಗೆ ದರದಲ್ಲಿ ರಿಯಾಯಿತಿ ವಿಧಿಸಲಾಗಿತ್ತು. ನಾವು ಪ್ರತಿ ಟಿಕೆಟ್‌ಗೆ ಕನಿಷ್ಠ 212 ಡಾಲರ್ (₹ 17,323) ತೆತ್ತಿದ್ದೇವೆ. ಪ್ಯಾಕೇಜ್‌ ಮೂಲಕ ಹಲವು ಕ್ರೀಡೆಗಳನ್ನು ನೋಡಲು ಅವಕಾಶ ಕೊಡಬೇಕಿತ್ತು. ಆದರೆ ಸಂಘಟಕರು ಹಾಗೆ, ಮಾಡಲಿಲ್ಲ. ಟಿಕೆಟ್‌ಗಾಗಿ ನಾವು ಸಾವಿರಾರು ಡಾಲರ್ ವ್ಯಯಿಸಿದ್ದೇವೆ‘ ಎಂಬುದು ಟಕೆಟ್‌ ಪಡೆದುಕೊಂಡವರೊಬ್ಬರ ಅಭಿಪ್ರಾಯ. ‘ಫುಟ್ಬಾಲ್ ಪಂದ್ಯ ವೀಕ್ಷಣೆಗೆ 53 ಡಾಲರ್‌ (₹ 4,331) ಆದರೂ ಎರಡು ಇತರ ಕ್ರೀಡೆಗಳ ಟಿಕೆಟ್ ಪಡೆದುಕೊಂಡರಷ್ಟೇ ಫುಟ್ಬಾಲ್ ಪಂದ್ಯ ವೀಕ್ಷಿಸಲು ಪ್ರವೇಶ ನೀಡಲಾಗುತ್ತದೆ‘ ಎಂದು ಕ್ರೀಡಾಪ್ರೇಮಿ ಬೆನ್ನಿ ತಿಳಿಸಿದರು. ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಬೆನ್ನಿ ಅವರು ಟಿಕೆಟ್‌ ಪಡೆಯಲು ಆಯ್ಕೆ ಮಾಡಿದ ಅದೃಷ್ಟಶಾಲಿಗಳಲ್ಲಿ ಒಬ್ಬರು. ಅವರು ಟಿಕೆಟ್ ಪಡೆಯಲು ಒಲಿಂಪಿಕ್ ಕಚೇರಿಯ ಆನ್‌ಲೈನ್‌ ವೇದಿಕೆಗೆ ಲಾಗಿನ್‌ ಆದಾಗ ಕೈಗೆಟುಕುವ ದರದ ಟಿಕೆಟ್‌ಗಳೆಲ್ಲವೂ ಮಾರಾಟವಾಗಿದ್ದವು. ‘ಲಭ್ಯವಿರುವ ಟಿಕೆಟ್‌ಗಳಲ್ಲಿ ಬ್ಯಾಸ್ಕೆಟ್‌ಬಾಲ್ ಅಥವಾ ಹ್ಯಾಂಡ್‌ಬಾಲ್‌ಗೆ 160 ಡಾಲರ್ ( ₹ 13,074 ), ಈಜು 244 ಡಾಲರ್ ( ₹19,938 ) ಮತ್ತು ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಅರ್ಹತಾ ಸುತ್ತು ವೀಕ್ಷಿಸಲು ಭಾರಿ ಮೊತ್ತದ 732 ಡಾಲರ್‌ (₹ 59,814) ದರದ ಟಿಕೆಟ್‌ ಖರೀದಿಸಬೇಕಾಗುತ್ತದೆ‘ ಎಂದು ಅವರು ತಮ್ಮ ಅಸಹಾಯಕತೆ ತಿಳಿಸಿದರು. ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಒಲಿಂಪಿಕ್ಸ್ ಕ್ರೀಡಾ ಕೂಟ ನಡೆಯುತ್ತದೆ. ಕೊನೆಯ ಒಲಿಂಪಿಕ್ಸ್ ಜಪಾನ್‌ ದೇಶದ ಟೊಕಿಯೋದಲ್ಲಿ ನಡೆದಿತ್ತು. ಕೊರೊನಾ ಹಿನ್ನೆಲೆ 2020ರಂದು ನಡೆಯಬೇಕಿದ್ದ ಕ್ರೀಡಾಕೂಟ 2021ರಂದು ಜರುಗಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.