ಫಾರ್ಮುಲಾ 2: ಮಿಂಚಿದ ಕುಶ್‌ ಮೈನಿ ಸಖೀರ್‌, ಬಹರೇನ್‌: ಭಾರತದ ಕುಶ್‌ ಮೈನಿ ಅವರು ತಮ್ಮ ಚೊಚ್ಚಲ ಫಾರ್ಮುಲಾ 2 ರೇಸ್‌ನಲ್ಲಿ ಗಮನ ಸೆಳೆಯುವ ಪ್ರದರ್ಶನ ನೀಡಿದರು. ಬಹರೇನ್‌ನ ಸಖೀರ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಶನಿವಾರ ಸ್ಪ್ರಿಂಟ್‌ ರೇಸ್‌ನಲ್ಲಿ ಏಳನೇ ಸ್ಥಾನ ಪಡೆದ ಅವರು ಭಾನುವಾರ ನಡೆದ ಫೀಚರ್ ರೇಸ್‌ನಲ್ಲಿ ನಾಲ್ಕನೇ ಸ್ಥಾನ ಗಳಿಸಿದರು. ಈ ಮೂಲಕ ಒಟ್ಟು 14 ಪಾಯಿಂಟ್ಸ್‌ ಕಲೆಹಾಕಿದರು. ಭಾರತದ ಯುವ ಸ್ಪರ್ಧಿ ಅರ್ಹತಾ ಸ್ಪರ್ಧೆಯಲ್ಲಿ ಆರನೆಯವರಾಗಿದ್ದರು. ಭಾರತದ ಇನ್ನೊಬ್ಬ ಚಾಲಕ ಜೆಹಾನ್ ದಾರೂವಾಲಾ ನಿರಾಸೆ ಅನುಭವಿಸಿದರು. ಸ್ಪ್ರಿಂಟ್‌ ರೇಸ್‌ನಲ್ಲಿ ಆರನೇ ಸ್ಥಾನ ಪಡೆದ ಅವರು ಫೀಚರ್‌ ರೇಸ್‌ನಲ್ಲಿ 17ನೆಯವರಾಗಿ ಸ್ಪರ್ಧೆ ಕೊನೆಗೊಳಿಸಿದರು. ಕುಶ್‌ ಅವರು ಮೊದಲ ರೇಸ್‌ ಬಳಿಕ ಚಾಲಕರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಮುಂದಿನ ರೇಸ್‌ ಸೌದಿ ಅರೇಬಿಯಾದಲ್ಲಿ ಇದೇ 17 ರಿಂದ 19ರ ವರೆಗೆ ನಡೆಯಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.