ಅಂತರ ಇಲಾಖಾ ಹಾಕಿ ಟೂರ್ನಿ: ಸರ್ವಿಸಸ್‌ಗೆ ಗೆಲುವು, ಸೆಮಿಫೈನಲ್‌ಗೆ ಆರ್‌ಎಸ್‌ಪಿಬಿ ಬೆಂಗಳೂರು: ರೈಲ್ವೆ ಸ್ಪೋರ್ಟ್ಸ್‌ ಪ್ರಮೋಷನ್ ಬೋರ್ಡ್‌ (ಆರ್‌ಎಸ್‌ಪಿಬಿ) ಮತ್ತು ಪೆಟ್ರೋಲಿಯಂ ಸ್ಪೋರ್ಟ್ಸ್‌ ಪ್ರಮೋಷನ್ ಬೋರ್ಡ್‌ (ಪಿಎಸ್‌ಪಿಬಿ) ತಂಡಗಳು ಹಾಕಿ ಇಂಡಿಯಾ ಆಶ್ರಯದ ಅಂತರ ಇಲಾಖಾ ಹಾಕಿ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿದವು. ಭಾನುವಾರ ಇಲ್ಲಿ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಆರ್‌ಎಸ್‌ಪಿಬಿ 3–2 ಗೋಲುಗಳಿಂದ ಆಲ್‌ ಇಂಡಿಯಾ ಪೊಲೀಸ್‌ ಸ್ಪೋರ್ಟ್ಸ್‌ ಕಂಟ್ರೋಲ್ ಬೋರ್ಡ್‌ ತಂಡವನ್ನು ಮಣಿಸಿತು. ಹ್ಯಾಟ್ರಿಕ್ ಗೋಲು ಗಳಿಸಿದ ಯುವರಾಜ್‌ ವಾಲ್ಮೀಕಿ (32, 49 ಮತ್ತು 52ನೇ ನಿ.) ಅವರು ರೈಲ್ವೆ ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು. ಪೊಲೀಸ್‌ ತಂಡದ ಪರ ವರಿಂದರ್‌ ಸಿಂಗ್‌ (21ನೇ ನಿ.) ಮತ್ತು ಬಲ್ವಿಂದರ್‌ ಸಿಂಗ್‌ (42) ಗೋಲು ಗಳಿಸಿದರು. ಸೋಮವಾರ ನಡೆಯಲಿರುವ ಸೆಮಿಫೈನಲ್‌ನಲ್ಲಿ ಆರ್‌ಎಸ್‌ಪಿಬಿ ತಂಡ ಸೆಂಟ್ರಲ್‌ ಇಂಡಸ್ಟ್ರಿಯಲ್‌ ಸೆಕ್ಯುರಿಟಿ ಫೋರ್ಸ್‌ (ಸಿಐಎಸ್‌ಎಫ್‌) ವಿರುದ್ಧ ಪೈಪೋಟಿ ನಡೆಸಲಿದೆ. ಎಂಟರಘಟ್ಟದ ಪಂದ್ಯದಲ್ಲಿ ಸಿಐಎಸ್‌ಎಫ್‌ ತಂಡ ಶೂಟೌಟ್‌ನಲ್ಲಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ತಂಡವನ್ನು ಮಣಿಸಿತು. ನಿಗದಿತ ಅವಧಿಯ ಬಳಿಕ ಉಭಯ ತಂಡಗಳು 3–3 ರಲ್ಲಿ ಡ್ರಾ ಸಾಧಿಸಿದ್ದವು. ಶೂಟೌಟ್‌ನಲ್ಲಿ ಸಿಐಎಸ್‌ಎಫ್‌ 3–2 ರಲ್ಲಿ ಗೆದ್ದಿತು. ಇನ್ನೊಂದು ಸೆಮಿಫೈನಲ್‌ನಲ್ಲಿ ಪಿಎಸ್‌ಪಿಬಿ ಮತ್ತು ಸರ್ವಿಸಸ್‌ ಸ್ಪೋರ್ಟ್ಸ್‌ ಕಂಟ್ರೋಲ್ ಬೋರ್ಡ್‌ (ಎಸ್‌ಎಸ್‌ಸಿಬಿ) ತಂಡಗಳು ಎದುರಾಗಲಿವೆ. ಪಿಎಸ್‌ಪಿಬಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ 4–3 ರಲ್ಲಿ ಫುಡ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ ತಂಡವನ್ನು ಮಣಿಸಿತು. ನಿಗದಿತ ಅವಧಿಯಲ್ಲಿ ಪಂದ್ಯ 3–3 ರಲ್ಲಿ ಡ್ರಾ ಆಗಿತ್ತು. ಎಸ್‌ಎಸ್‌ಸಿಬಿ 9–2 ಗೋಲುಗಳಿಂದ ಐಟಿಬಿಪಿ ಸೆಂಟ್ರಲ್‌ ಹಾಕಿ ತಂಡವನ್ನು ಸೋಲಿಸಿತು. ಪವನ್‌ ರಾಜಭರ್‌ (2, 14 ಮತ್ತು 26ನೇ ನಿ.) ಮತ್ತು ಹರ್ಮನ್‌ ಸಿಂಗ್‌ (51, 52 ಮತ್ತು 55ನೇ ನಿ.) ಅವರು ಹ್ಯಾಟ್ರಿಕ್‌ ಗೋಲು ಗಳಿಸಿ ತಂಡದ ಭರ್ಜರಿಗೆ ಗೆಲುವಿಗೆ ಕಾರಣರಾದರು. ಇತರ ಗೋಲುಗಳನ್ನು ಸನ್ನಿ ಮಲಿಕ್ (16), ಸಂಜಯ್‌ ಟೊಪ್ಪೊ (30) ಮತ್ತು ಅಜಿಂಕ್ಯಾ ಜಾಧವ್‌ (49) ತಂದಿತ್ತರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.