ಡಬ್ಲ್ಯುಎಫ್‌ಐ: ತನಿಖಾ ವರದಿ ಸಲ್ಲಿಸಲು ಅವಧಿ ವಿಸ್ತರಣೆ ನವದೆಹಲಿ: ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್‌ಭೂಷನ್‌ ಶರಣ್‌ಸಿಂಗ್ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಕುರಿತು ತನಿಖೆ ನಡೆಸಲು ನೇಮಿಸಿರುವ ಮೇಲುಸ್ತುವಾರಿ ಸಮಿತಿಗೆ ವರದಿ ಸಲ್ಲಿಸಲು ಕೇಂದ್ರ ಕ್ರೀಡಾ ಸಚಿವಾಲಯ ಎರಡು ವಾರಗಳ ಹೆಚ್ಚುವರಿ ಅವಧಿಯನ್ನು ನೀಡಿದೆ. ಮಹಿಳಾ ಕುಸ್ತಿಪಟುಗಳ ಮೇಲೆ ಶರಣ್‌ಸಿಂಗ್‌ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿ ದೇಶದ ಪ್ರಮುಖ ಕುಸ್ತಿಪಟುಗಳು ಪ್ರತಿಭಟನೆ ನಡೆಸಿದ್ದರು. ಪ್ರಕರಣದ ತನಿಖೆಗಾಗಿ ಬಾಕ್ಸರ್ ಮೇರಿ ಕೋಮ್ ನೇತೃತ್ವದಲ್ಲಿ ಜನವರಿ 23ರಂದು ಸಮಿತಿ ರಚಿಸಲಾಗಿತ್ತು. ಸದ್ಯ ಇದೇ ಸಮಿತಿಯು ಡಬ್ಲ್ಯುಎಫ್‌ಐನ ದೈನಂದಿನ ವ್ಯವಹಾರ ನೋಡಿಕೊಳ್ಳುತ್ತಿದೆ. ತನಿಖಾ ವರದಿ ಸಲ್ಲಿಸಲು ಈ ಮೊದಲು ಸಚಿವಾಲಯವು ನಾಲ್ಕು ವಾರಗಳ ಗಡುವು ನೀಡಿತ್ತು. ಆದರೆ ಸಮಿತಿಯ ಮನವಿಯ ಮೇರೆಗೆ ಈಗ ಮಾರ್ಚ್‌ 9ರವರೆಗೆ ವಿಸ್ತರಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.