ಕೊಡವ ಕೌಟುಂಬಿಕ ಹಾಕಿ ಹಬ್ಬ ಮಾರ್ಚ್‌ 18ರಿಂದ ಬೆಂಗಳೂರು: ಕೊಡವ ಕೌಟುಂಬಿಕ ಹಾಕಿ ಹಬ್ಬವು ಇದೇ 18ರಿಂದ ಏಪ್ರಿಲ್ 9ರವರೆಗೆ ಕೊಡಗು ಜಿಲ್ಲೆಯ ನಾಪೋಕ್ಲುವಿನಲ್ಲಿ ನಡೆಯಲಿದೆ. ಈ ಉತ್ಸವದಲ್ಲಿ 336 ತಂಡಗಳು ಸ್ಪರ್ಧಿಸಲಿವೆ. ‘ಕೊಡವ ಕೌಟುಂಬಿಕ ಹಾಕಿಯ ಉತ್ಸವವು ಈಗಾಗಲೇ ಲಿಮ್ಕಾ ದಾಖಲೆ ಪುಸ್ತಕವನ್ನು ಸೇರಿದೆ. ಈ ಬಾರಿಯು ಅತಿ ಹೆಚ್ಚು ಸಂಖ್ಯೆಯಲ್ಲಿ ತಂಡಗಳು ಭಾಗವಹಿಸುತ್ತಿವೆ. ಅಪ್ಪಚೆಟ್ಟೊಳಂಡ ಕುಟುಂಬವು ಈ ಸಲ ಆತಿಥ್ಯ ವಹಿಸುತ್ತಿದೆ. ಉದ್ಘಾಟನೆ ಪಂದ್ಯದಲ್ಲಿ ಭಾರತ ಜೂನಿಯರ್ ಇಲೆವನ್ ಹಾಗೂ ಕರ್ನಾಟಕ ಪುರುಷರ ಇಲೆವನ್ ತಂಡವು ಮುಖಾಮುಖಿಯಾಗಲಿವೆ’ ಎಂದು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಘಟನಾ ಅಧ್ಯಕ್ಷ ಮನು ಮುತ್ತಪ್ಪ ಹೇಳಿದರು. ‘ಈ ಟೂರ್ನಿಗೆ ರಾಜ್ಯ ಸರ್ಕಾರದಿಂದ ಒಂದು ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಈಚೆಗೆ ಹೇಳಿದ್ದಾರೆ. ಅತಿವೃಷ್ಟಿ, ಪ್ರವಾಹ ಮತ್ತು ಕೋವಿಡ್ ಕಾರಣದಿಂದಾಗಿ ಸುಮಾರು ನಾಲ್ಕು ವರ್ಷಗಳಿಂದ ಟೂರ್ನಿ ಆಯೋಜನೆಯಾಗಿಲ್ಲ. ಈ ಬಾರಿ ಅದ್ದೂರಿಯ ಜೊತೆಗೆ ಅರ್ಥಪೂರ್ಣವಾಗಿಯೂ ಟೂರ್ನಿ ನಡೆಯಲಿದೆ’ ಎಂದರು. ‘ವಿಶ್ವದಾದ್ಯಂತ ನೀರಿನ ಕೊರತೆ ಇದೆ. ಆದ್ದರಿಂದಾಗಿ ಹಂತಹಂತವಾಗಿ ಆಸ್ಟ್ರೋ ಟರ್ಫ್‌ಗಳನ್ನು ಕೈಬಿಟ್ಟು, ನ್ಯಾಚುರಲ್ ಗ್ರಾಸ್ ಅಂಕಣಗಳನ್ನು ಹಾಕುವ ಯೋಜನೆ ಆರಂಭವಾಗಿದೆ. ಅದಕ್ಕೆ ಪೂರಕವಾಗಿ ಕೊಡಗು ಜಿಲ್ಲೆಯ 30 ಸರ್ಕಾರಿ ಶಾಲೆಯಲ್ಲಿ ಸರ್ಕಾರದ ಸಹಯೋಗದೊಂದಿಗೆ ನೈಸರ್ಗಿಕ ಹುಲ್ಲಿನಂಕಣಗಳನ್ನು ನಿರ್ಮಿಸಿಕೊಡಲಿದ್ದೇವೆ. ಅಲ್ಲದೇ ಈ ಟೂರ್ನಿಯಲ್ಲಿ ಸಂಗ್ರಹಿಸಲಾಗುವ ಪ್ರಾಯೋಜಕತ್ವದ ಶೇ 2ರಷ್ಟನ್ನು ಹಿರಿಯ ನಾಗರಿಕ ಆರೋಗ್ಯ ನಿರ್ವಹಣೆ ಕೇಂದ್ರಗಳು ಹಾಗೂ ಶೇ 2ರಷ್ಟನ್ನು ಅನಾಥಾಲಯಕ್ಕೆ ನೀಡಲಾಗುವುದು. ಸ್ವಚ್ಛತೆ ನಿರ್ವಹಣೆಗಾಗಿ ಆದ್ಯತೆ ನೀಡಲಾಗಿದೆ ’ ಎಂದು ಮನು ಮುತ್ತಪ್ಪ ತಿಳಿಸಿದರು. ‘ಮಹಿಳಾ ಆಟಗಾರ್ತಿಯರಿಗೂ ಈ ಟೂರ್ನಿಯಲ್ಲಿ ಅವಕಾಶವಿದೆ. ಅವರು ತಮ್ಮ ಗಂಡನ ಮನೆ ಅಥವಾ ತವರು ಕುಟುಂಬದ ಪರವಾಗಿ ಆಡಬಹುದಾಗಿದೆ. ಕೊಡಗಿನಿಂದ ಈ ಹಿಂದೆಯೂ ಬಹಳಷ್ಟು ಮಂದಿ ಪುರುಷ ಹಾಗೂ ಮಹಿಳಾ ಹಾಕಿ ಆಟಗಾರರು ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ’ ಎಂದರು. ‘ಇತ್ತೀಚಿನ ದಿನಗಳಲ್ಲಿ ಭಾರತ ತಂಡಕ್ಕೆ ಕೊಡಗಿನಿಂದ ಆಯ್ಕೆಯಾಗುವವರ ಸಂಖ್ಯೆ ಕಡಿಮೆಯಾಗಿದ. ಆದರೆ, ಜೂನಿಯರ್ ಹಂತದಲ್ಲಿ ಉತ್ತಮ ಆಟಗಾರರು ಇದ್ದಾರೆ. ಕೊಡಗಿನಲ್ಲಿ ಇನ್ನಷ್ಟು ಉತ್ತಮ ಸೌಲಭ್ಯಗಳನ್ನು ನಿರ್ಮಿಸಿ ಹಾಗೂ ಕೋಚ್‌ಗಳನ್ನು ನೇಮಕ ಮಾಡಲು ಸರ್ಕಾರ ಮುಂದಾಗಬೇಕು’ ಎಂದು ಅಭಿಪ್ರಾಯಪಟ್ಟರು. ‘ಈ ಟೂರ್ನಿಯಲ್ಲಿ ವಿಜೇತರಾದವರಿಗೆ ಟ್ರೋಫಿ ಹಾಗೂ ₹ 3 ಲಕ್ಷ ಬಹುಮಾನ ನೀಡಲಾಗುವುದು’ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.