ರಾಷ್ಟ್ರೀಯ ಅಂತರ ಇಲಾಖಾ ಹಾಕಿ ಟೂರ್ನಿ: ಫೈನಲ್‌ಗೆ ಆರ್‌ಎಸ್‌ಪಿಬಿ, ಪಿಎಸ್‌ಪಿಬಿ ಬೆಂಗಳೂರು: ಸಂಘಟಿತ ಆಟವಾಡಿದ ರೈಲ್ವೆ ಸ್ಪೋರ್ಟ್ಸ್ ಪ್ರಮೋಷನ್ ಬೋರ್ಡ್ (ಆರ್‌ಎಸ್‌ಪಿಬಿ) ಮತ್ತು ಪೆಟ್ರೊಲಿಯಂ ಸ್ಪೋರ್ಟ್ಸ್ ಪ್ರಮೋಷನ್ ಬೋರ್ಡ್ (ಪಿಎಸ್‌ಪಿಬಿ) ತಂಡದವರು ಹಾಕಿ ಇಂಡಿಯಾ ಆಶ್ರಯದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಅಂತರ ಇಲಾಖಾ ಪುರುಷರ ಹಾಕಿ ಟೂರ್ನಿಯ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟರು. ಮಂಗಳವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಆರ್‌ಎಸ್‌ಪಿಬಿ 5–0ಯಿಂದ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (ಸಿಐಎಸ್‌ಎಫ್‌) ತಂಡವನ್ನು ಪರಾಭವಗೊಳಿಸಿತು. ವಿಜೇತ ತಂಡದ ಪರ ಪ್ರದೀಪ್ ಸಿಂಗ್‌ 15ನೇ ನಿಮಿಷದಲ್ಲಿ ಗೋಲು ಗಳಿಸಿ ಮುನ್ನಡೆ ತಂದುಕೊಟ್ಟರು. ಅಮಿತ್ ರೋಹಿದಾಸ್‌ 24ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ ಮುನ್ನಡೆ ಹೆಚ್ಚಿಸಿದರು. ಬಳಿಕ 35ನೇ ನಿಮಿಷದಲ್ಲಿ ಪ್ರದೀಪ್‌ ಮತ್ತೊಂದು ಗೋಲು ಹೊಡೆದರು. ಈ ಹಂತದಲ್ಲಿ ಗೋಲು ಗಳಿಸುವ ಎದುರಾಳಿ ತಂಡದ ಪ್ರಯತ್ನಕ್ಕೆ ಫಲ ಸಿಗಲಿಲ್ಲ. ಯುವರಾಜ್ ವಾಲ್ಮೀಕಿ (37ನೇ ನಿ.) ಮತ್ತು ಅಜಿತ್ ಕುಮಾರ್ ಪಾಂಡೆ (53ನೇ ನಿ.) ಆರ್‌ಸಿಬಿಪಿ ತಂಡದ ಗೆಲುವಿಗೆ ಕೊಡುಗೆ ನೀಡಿದರು. ಸರ್ವಿಸಸ್‌ ಸ್ಪೋರ್ಟ್ಸ್ ಕಂಟ್ರೋಲ್ ಬೋರ್ಡ್ (ಎಸ್‌ಎಸ್‌ಸಿಬಿ) ಮತ್ತು ಪಿಎಸ್‌ಪಿಬಿ ತಂಡಗಳ ನಡುವಣ ನಾಲ್ಕರ ಘಟ್ಟದ ಇನ್ನೊಂದು ಪಂದ್ಯವು 3–3ರ ಸಮಬಲವಾಗಿತ್ತು. ಆದರೆ ಶೂಟೌಟ್‌ನಲ್ಲಿ 4–2ರಿಂದ ಗೆದ್ದ ಪಿಎಸ್‌ಪಿಬಿ ಫೈನಲ್ ಸ್ಥಾನ ಖಚಿತಪಡಿಸಿಕೊಂಡಿತು. ನಿಗದಿತ ಅವಧಿಯಲ್ಲಿ ಎಸ್‌ಎಸ್‌ಸಿಬಿ ತಂಡಕ್ಕಾಗಿ ಹರ್ಮನ್ ಸಿಂಗ್‌ (10ನೇ ನಿ.), ಪವನ್ ರಾಜಭರ್ (31ನೇ ನಿ.) ಮತ್ತು ಸುಶೀಲ್ ಧನ್ವರ್ (51ನೇ ನಿ.) ಗೋಲು ಗಳಿಸಿದರೆ, ಪಿಎಸ್‌ಪಿಬಿ ಪರ ಎಸ್‌. ವಿ. ಸುನಿಲ್‌ (30ನೇ ನಿ.), ಮಣಿಂದರ್ ಸಿಂಗ್‌ (34ನೇ ನಿ.) ಮತ್ತು ತಲ್ವಿಂದರ್ ಸಿಂಗ್‌ (42ನೇ ನಿ.) ಯಶಸ್ಸು ಸಾಧಿಸಿದರು. ಪಿಎಸ್‌ಪಿಬಿ ಮತ್ತು ಆರ್‌ಎಸ್‌ಪಿಬಿ ನಡುವಣ ಫೈನಲ್ ಪಂದ್ಯ ಬುಧವಾರ ಸಂಜೆ ನಾಲ್ಕು ಗಂಟೆಗೆ ನಡೆಯಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.