ರಾಷ್ಟ್ರೀಯ ಅಂತರ ಇಲಾಖಾ ಹಾಕಿ ಟೂರ್ನಿ: ಪೆಟ್ರೊಲಿಯಂ ಬೋರ್ಡ್ ತಂಡಕ್ಕೆ ಕಿರೀಟ ಬೆಂಗಳೂರು: ಪೆಟ್ರೊಲಿಯಂ ಸ್ಪೋರ್ಟ್ಸ್ ಪ್ರಮೋಷನ್‌ ಬೋರ್ಡ್ (ಪಿಎಸ್‌ಪಿಬಿ) ತಂಡವು ಹಾಕಿ ಇಂಡಿಯಾ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಅಂತರ ಇಲಾಖಾ ಹಾಕಿ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿತು. ಬುಧವಾರ ಇಲ್ಲಿ ನಡೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಿಎಸ್‌ಪಿಬಿ ಪೆನಾಲ್ಟಿ ಶೂಟೌಟ್‌ನಲ್ಲಿ 3–1ರಿಂದ ರೈಲ್ವೆ ಸ್ಪೋರ್ಟ್ಸ್ ಪ್ರಮೋಷನ್ ಬೋರ್ಡ್‌ ತಂಡವನ್ನು ಸೋಲಿಸಿತು. ನಿಗದಿತ ಅವಧಿಯಲ್ಲಿ ಉಭಯ ತಂಡಗಳು 2–2 ಗೋಲುಗಳ ಸಮಬಲ ಸಾಧಿಸಿದ್ದವು. ಹೀಗಾಗಿ ಶೂಟೌಟ್ ಮೊರೆಹೋಗಲಾಗಿತ್ತು. ಪಂದ್ಯದ ಆರನೇ ನಿಮಿಷದಲ್ಲೇ ಗೋಲು ದಾಖಲಿಸಿದ ಯುವರಾಜ್ ವಾಲ್ಮೀಕಿ, ರೈಲ್ವೆ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಆದರೆ ಈ ಸಂಭ್ರಮ ಹೆಚ್ಚು ಹೊತ್ತು ಉಳಿಯಲಿಲ್ಲ. ಪಿಎಸ್‌ಪಿಬಿಯ ಸುನಿಲ್ ಯಾದವ್‌ ಎಂಟನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ ಸಮಬಲ ಸಾಧಿಸುವಂತೆ ಮಾಡಿದರು. ವಿಕ್ರಮಜೀತ್ ಸಿಂಗ್‌ (27ನೇ ನಿಮಿಷ) ಗಳಿಸಿದ ಗೋಲು ಪಿಎಸ್‌ಪಿಬಿ ಮುನ್ನಡೆಗೆ ಕಾರಣವಾಯಿತು. ರೈಲ್ವೆ ತಂಡದ ಅಜಿತ್‌ ಕುಮಾರ್ ರೆಡ್ಡಿ 58ನೇ ನಿಮಿಷದಲ್ಲಿ ಕೈಚಳಕ ತೋರಿ ಸಮಬಲಕ್ಕೆ ಕಾರಣರಾದರು. ಬಳಿಕ ಪಿಎಸ್‌ಪಿಬಿ ಆಟಗಾರರು ಶೂಟೌಟ್‌ನಲ್ಲಿ ಗೆದ್ದು ಸಂಭ್ರಮಿಸಿದರು. ಸರ್ವಿಸಸ್‌ ಸ್ಪೋರ್ಟ್ಸ್ ಕಂಟ್ರೋಲ್ ಬೋರ್ಡ್‌ ತಂಡ ಮೂರನೇ ಸ್ಥಾನ ಗಳಿಸಿತು. ಈ ಸ್ಥಾನ ನಿರ್ಧರಿಸಲು ನಡೆದ ಪಂದ್ಯದಲ್ಲಿ ತಂಡವು 7–2ರಿಂದ ಸೆಂಟ್ರಲ್ ಇಂಡಸ್ಟ್ರಿಯಲ್‌ ಸೆಕ್ಯೂರಿಟಿ ಫೋರ್ಸ್ ತಂಡಕ್ಕೆ ಸೋಲುಣಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.