ಹಾರ್ದಿಕ್‌, ಸವಿತಾಗೆ ಗೌರವ ನವದೆಹಲಿ: ಮಿಡ್‌ಫೀಲ್ಡರ್‌ ಹಾರ್ದಿಕ್‌ ಸಿಂಗ್‌ ಮತ್ತು ಗೋಲ್‌ಕೀಪರ್ ಸವಿತಾ ಪೂನಿಯಾ ಅವರು ಕ್ರಮವಾಗಿ ಹಾಕಿ ಇಂಡಿಯಾದ ‘ವರ್ಷದ ಆಟಗಾರ’ ಹಾಗೂ ‘ವರ್ಷದ ಆಟಗಾರ್ತಿ’ ಗೌರವ ಪಡೆದುಕೊಂಡರು. ಶುಕ್ರವಾರ ಇಲ್ಲಿ ನಡೆದ ಹಾಕಿ ಇಂಡಿಯಾದ ಐದನೇ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 2022 ಮತ್ತು 2021ರ ಸಾಲಿನ ಪ್ರಶಸ್ತಿ ಪ್ರದಾನ ಮಾಡಲಾಯಿತು. 24 ವರ್ಷದ ಹಾರ್ದಿಕ್‌, ಹಿರಿಯ ಆಟಗಾರರಾದ ಮನ್‌ಪ್ರೀತ್‌ ಸಿಂಗ್‌ ಮತ್ತು ಹರ್ಮನ್‌ಪ್ರೀತ್‌ ಸಿಂಗ್‌ ಅವರನ್ನು ಹಿಂದಿಕ್ಕಿ ಈ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಜನವರಿಯಲ್ಲಿ ನಡೆದಿದ್ದ ಎಫ್‌ಐಎಚ್‌ ಹಾಕಿ ವಿಶ್ವಕಪ್‌ನಲ್ಲಿ ಹಾರ್ದಿಕ್‌ ಅವರು ಸ್ಪೇನ್‌ ವಿರುದ್ಧ ಗೋಲು ಗಳಿಸಿದ್ದರು. ಇಂಗ್ಲೆಂಡ್‌ ವಿರುದ್ಧದ ಎರಡನೇ ಲೀಗ್‌ ಪಂದ್ಯದಲ್ಲಿ ಗಾಯಗೊಂಡದ್ದರಿಂದ ಬಳಿಕದ ಪಂದ್ಯಗಳಲ್ಲಿ ಆಡಿರಲಿಲ್ಲ. ಸವಿತಾ ಅವರು ಡಿಸೆಂಬರ್‌ನಲ್ಲಿ ನಡೆದಿದ್ದ ಎಫ್‌ಐಎಚ್‌ ನೇಷನ್ಸ್‌ ಕಪ್‌ನಲ್ಲಿ ಭಾರತ ತಂಡವನ್ನು ಟ್ರೋಫಿಯತ್ತ ಮುನ್ನಡೆಸಿದ್ದರು. ಹಾರ್ದಿಕ್ ಮತ್ತು ಸವಿತಾ ಅವರು ಟ್ರೋಫಿಯ ಜತೆ ₹ 25 ಲಕ್ಷ ನಗದು ಬಹುಮಾನ ತಮ್ಮದಾಗಿಸಿಕೊಂಡರು. 2021ರ ಸಾಲಿನ ‘ವರ್ಷದ ಆಟಗಾರ್ತಿ’ ಪ್ರಶಸ್ತಿಯೂ ಸವಿತಾ ಪಾಲಾಯಿತು. ‘ವರ್ಷದ ಆಟಗಾರ’ ಗೌರವ ಹರ್ಮನ್‌ಪ್ರೀತ್‌ ಸಿಂಗ್‌ ಪಡೆದುಕೊಂಡರು. 2022ರ ‘ಬೆಸ್ಟ್‌ ಡಿಫೆಂಡರ್‌’ ಪ್ರಶಸ್ತಿಯೂ ಹರ್ಮನ್‌ ಗೆದ್ದುಕೊಂಡರು. 1964ರ ಒಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸಿದ್ದ ಭಾರತ ತಂಡದ ಸದಸ್ಯರಾಗಿದ್ದ ಗುರುಬಕ್ಷ್‌ ಸಿಂಗ್‌ ಅವರಿಗೆ ‘ಮೇಜರ್‌ ಧ್ಯಾನ್‌ಚಂದ್‌ ಜೀವಮಾನದ ಸಾಧನೆ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಯು ₹ 30 ಲಕ್ಷ ನಗದು ಬಹುಮಾನ ಒಳಗೊಂಡಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.