ಅಥ್ಲೆಟಿಕ್ ಚಾಂಪಿಯನ್‌ಷಿಪ್: 92 ವರ್ಷದ ಬೋಪಯ್ಯಗೆ 2 ಚಿನ್ನ ಬೆಂಗಳೂರು: ಕರ್ನಾಟಕದ ಪಿ.ಪಿ. ಬೋಪಯ್ಯ ಅವರು ಸಿಡ್ನಿಯಲ್ಲಿ ಇತ್ತೀಚೆಗೆ ನಡೆದ ಆಸ್ಟ್ರೇಲಿಯನ್ ಮಾಸ್ಟರ್ಸ್ ಇಂಟರ್‌ನ್ಯಾಷನಲ್ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಎರಡು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. 92 ವರ್ಷದ ಬೋಪಯ್ಯ ಅವರು 90 ವರ್ಷಕ್ಕಿಂತ ಮೇಲಿನವರ ವಿಭಾಗದ 100 ಮೀ. ಓಟ ಮತ್ತು ಜಾವೆಲಿನ್ ಥ್ರೊ ಸ್ಪರ್ಧೆಗಳಲ್ಲಿ ಅಗ್ರಸ್ಥಾನ ಗಳಿಸಿದರು. ಪಿ.ಪಿ. ಬೆಳ್ಳಿಯಪ್ಪ ಅವರು 75 ವರ್ಷಕ್ಕಿಂತ ಮೇಲಿನವರ ವಿಭಾಗದ ರೇಸ್‌ವಾಕ್‌ನಲ್ಲಿ ಚಿನ್ನ ಮತ್ತು 100 ಮೀ. ಓಟದಲ್ಲಿ ಕಂಚು, 75 ವರ್ಷಕ್ಕಿಂತ ಮೇಲಿನವರ ಮಹಿಳಾ ವಿಭಾಗದ ಜಾವೆ ಲಿನ್‌ ಥ್ರೊನಲ್ಲಿ ಮಾಚಮ್ಮ ಪೊನ್ನಪ್ಪ ಬೆಳ್ಳಿ ಗೆದ್ದರು. ದದಿಬಾಲ್ ಸಿಂಗ್ ಚೌಹಾನ್‌ ಅವರು 55ಕ್ಕಿಂತ ಮೇಲಿನವರ ವಿಭಾಗದ 1500 ಮೀ. ರೇಸ್‌ವಾಕ್‌ನಲ್ಲಿ ಚಿನ್ನ, 5,000 ಮೀ. ರೇಸ್‌ವಾಕ್‌ನಲ್ಲಿ ಬೆಳ್ಳಿ ಮತ್ತು ಪೋಲ್‌ವಾಲ್ಟ್‌ನಲ್ಲಿ ಬೆಳ್ಳಿ ಜಯಿಸಿದರು. 30 ವರ್ಷಕ್ಕಿಂತ ಮೇಲಿನವರ ಲಾಂಗ್‌ಜಂಪ್‌ ಮತ್ತು ಟ್ರಿಪಲ್‌ ಜಂಪ್‌ನಲ್ಲಿ ಮೋಹನ್‌ ರೆಡ್ಡಿ ಚಿನ್ನ ಮತ್ತು ಬಿ.ಸಿ. ಕೃಷ್ಣ 80 ವರ್ಷಕ್ಕಿಂತ ಮೇಲಿನವರ ಡಿಸ್ಕಸ್‌ ಥ್ರೊ ಮತ್ತು ಹ್ಯಾಮರ್‌ ಥ್ರೊನಲ್ಲಿ ಬೆಳ್ಳಿ, ಜಾವೆಲಿನ್‌ ಥ್ರೊನಲ್ಲಿ ಕಂಚು ಜಯಿಸಿದರು. ಪದಕ ಜಯಿಸಿದ ಅಥ್ಲೀಟ್‌ಗಳನ್ನು ಪ್ಯಾನ್‌ ಇಂಡಿಯಾ ಮಾಸ್ಟರ್ಸ್ ಗೇಮ್ಸ್ ಫೆಡರೇಷನ್‌ ಪ್ರಧಾನ ಕಾರ್ಯದರ್ಶಿ ಡಿ.ಎ. ನಟರಾಜ್‌ ಅಭಿನಂದಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.