ನಿಖತ್‌ ಜರೀನ್‌ ಗೆಲುವಿನ ಪಂಚ್ ನವದೆಹಲಿ: ಚಿನ್ನ ಗೆಲ್ಲುವ ನೆಚ್ಚಿನ ಬಾಕ್ಸರ್‌ ಎನಿಸಿರುವ ಭಾರತದ ನಿಖರ್‌ ಜರೀನ್‌ ಅವರು ವಿಶ್ವ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದರು. ಗುರುವಾರ ನಡೆದ ಲೈಟ್‌ ಫ್ಲೈವೇಟ್‌ (48 ರಿಂದ 50 ಕೆ.ಜಿ) ವಿಭಾಗದ ಸ್ಪರ್ಧೆಯಲ್ಲಿ ಪ್ರಬಲ ಪಂಚ್‌ಗಳ ಮೂಲಕ ಮಿಂಚಿದ ನಿಖತ್, ಅಜರ್‌ಬೈಜಾನ್‌ನ ಅನಾಖನಿಮ್ ಇಸ್ಮಾಯಿಲೊವಾ ವಿರುದ್ಧ ಗೆದ್ದರು. ಹಾಲಿ ಚಾಂಪಿಯನ್‌ ಆಗಿರುವ ಭಾರತದ ಬಾಕ್ಸರ್‌, ಆರ್‌ಎಸ್‌ಸಿ (ರೆಫರಿಯಿಂದ ಪಂದ್ಯ ಸ್ಥಗಿತ) ಆಧಾರದಲ್ಲಿ ಗೆದ್ದರು. ಆರಂಭದಿಂದಲೇ ಆಕ್ರಮಣಕಾರಿ ಪ್ರದರ್ಶನ ನೀಡಿದ ಅವರು ಸತತ ಪಂಚ್‌ಗಳಿಂದ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದರು. ರೆಫರಿ ಎರಡನೇ ಸುತ್ತಿನಲ್ಲಿ ಪಂದ್ಯ ನಿಲ್ಲಿಸಿದರು. ಪ್ರಿ ಕ್ವಾರ್ಟರ್‌ಗೆ ಸಾಕ್ಷಿ: 52 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಭಾರತದ ಸಾಕ್ಷಿ, ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. ಮೊದಲ ಸುತ್ತಿನ ಹಣಾಹಣಿಯಲ್ಲಿ ಅವರು 5–0 ರಲ್ಲಿ ಕೊಲಂಬಿಯದ ಮಾರ್ಟಿನೆಜ್‌ ಮರಿಯಾ ಜೋಸ್‌ ವಿರುದ್ಧ ಗೆದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.