ಆರ್ಲಿಯನ್ಸ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿ | ಮಿಥುನ್‌, ಪ್ರಿಯಾಂಶು ಶುಭಾರಂಭ ಆರ್ಲಿಯನ್ಸ್, ಫ್ರಾನ್ಸ್: ಭಾರತದ ಮಿಥುನ್ ಮಂಜುನಾಥ್ ಮತ್ತು ಪ್ರಿಯಾಂಶು ರಾಜಾವತ್ ಅವರು ಇಲ್ಲಿ ನಡೆಯುತ್ತಿರುವ ಆರ್ಲಿಯನ್ಸ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಗೆಲುವಿನ ಆರಂಭ ಮಾಡಿದ್ದಾರೆ. ಆದರೆ ಸಮೀರ್ ವರ್ಮಾ ಮೊದಲ ಸುತ್ತಿನಲ್ಲೇ ನಿರಾಸೆ ಅನುಭವಿಸಿದರು. ಬುಧವಾರ ಆರಂಭವಾದ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಕರ್ನಾಟಕದ ಮಿಥುನ್‌ 24-22, 25-23ರಿಂದ ಡೆನ್ಮಾರ್ಕ್‌ನ ವಿಕ್ಟರ್‌ ಸ್ವೆಂಡ್‌ಸನ್ ಅವರನ್ನು ಮಣಿಸಿದರು. ಮುಂದಿನ ಪಂದ್ಯದಲ್ಲಿ ಮಂಜುನಾಥ್ ಅವರಿಗೆ ಚೀನಾ ತೈಪೆಯ ಯು ಜೆನ್‌ ಸವಾಲು ಎದುರಾಗಿದೆ. ಯು ಜೆನ್‌ ಅವರು ಮೊದಲ ಸುತ್ತಿನಲ್ಲಿ ಡೆನ್ಮಾರ್ಕ್‌ನ ರಾಸ್ಮಸ್‌ ಗೆಮ್ಕೆ ಎದುರು ಸ್ಪರ್ಧಿಸಿದ್ದರು. ಆದರೆ ಗಾಯದಿಂದಾಗಿ ರಾಸ್ಮಸ್‌ ಪಂದ್ಯದ ಅರ್ಧದಲ್ಲೇ ಹಿಂದೆ ಸರಿದರು. ಮತ್ತೊಂದು ಹಣಾಹಣಿಯಲ್ಲಿ ಪ್ರಿಯಾಂಶು 21-18, 21-13ರಿಂದ ಭಾರತದವರೇ ಆದ ಕಿರಣ್ ಜಾರ್ಜ್ ಅವರಿಗೆ ಸೋಲುಣಿಸಿದರು. ಎರಡನೇ ಸುತ್ತಿನಲ್ಲಿ ಪ್ರಿಯಾಂಶು ಅವರು ಜಪಾನ್‌ನ ಕೆಂಟಾ ನಿಶಿಮೊಟೊ ಎದುರು ಆಡುವರು. ಸಮೀರ್‌ಗೆ ಸೋಲು: ಗೇಮ್‌ ಮುನ್ನಡೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗದ ಸಮೀರ್ 19-21, 21-19, 21-17ರಿಂದ ಐರ್ಲೆಂಡ್‌ನ ನಹತ್ ಎನ್‌ಗುಯೆನ್‌ ಎದುರು ಮಣಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.