ಬ್ಯಾಡ್ಮಿಂಟನ್: ಪ್ರಶಸ್ತಿ ಸುತ್ತಿಗೆ ಪ್ರಿಯಾಂಶು ರಾಜಾವತ್‌ ಆರ್ಲಿಯನ್ಸ್, ಫ್ರಾನ್ಸ್: ಅಮೋಘ ಆಟವಾಡಿದ ಭಾರತದ ಪ್ರಿಯಾಂಶು ರಾಜಾವತ್ ಅವರು ಆರ್ಲಿಯನ್ಸ್ ಮಾಸ್ಟರ್ಸ್ ಬ್ಯಾಡ್ಮಿಂಟನ್‌ ಟೂರ್ನಿಯ ಫೈನಲ್‌ಗೆ ಲಗ್ಗೆಯಿಟ್ಟರು. ಇಲ್ಲಿ ನಡೆಯುತ್ತಿರುವ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಪ್ರಿಯಾಂಶು 21-12, 21-9ರಿಂದ ಐರ್ಲೆಂಡ್‌ನ ನಹತ್‌ ಎನ್‌ಗುಯೆನ್ ಅವರನ್ನು ಪರಾಭವಗೊಳಿಸಿದರು. 2022ರ ಥಾಮಸ್‌ ಕಪ್ ಗೆದ್ದ ಭಾರತ ತಂಡದಲ್ಲಿದ್ದ 21 ವರ್ಷದ ರಾಜಾಂಶು, ಶನಿವಾರದ ಈ ಪಂದ್ಯದಲ್ಲಿ ಸಂಪೂರ್ಣ ಪಾರಮ್ಯ ಮೆರೆದರು. ಅವರಿಗೆ ಇದು ಸೂಪರ್‌ 300 ವಿಶ್ವ ಟೂರ್‌ ಮಟ್ಟದಲ್ಲಿ ಮೊದಲ ಫೈನಲ್‌ ಪ್ರವೇಶವಾಗಿದೆ. ಫೈನಲ್‌ನಲ್ಲಿ ಭಾರತದ ಆಟಗಾರ, ಡೆನ್ಮಾರ್ಕ್‌ನ ಮ್ಯಾಗ್ನಸ್‌ ಜೋಹಾನ್‌ಸನ್ ಅಥವಾ ಚೀನಾದ ಲೆ ಲಾನ್‌ ಷಿ ಎದುರು ಆಡುವರು. ಪ್ರಿಯಾಂಶು ಈ ಹಣಾಹಣಿಯಲ್ಲಿ ನೆಟ್‌ ಶಾಟ್‌ಗಳಲ್ಲಿ ಹೆಚ್ಚು ಚುರುಕುತನ ತೋರಿದರು. ಎದುರಾಳಿಯ ಫೋರ್‌ಹ್ಯಾಂಡ್‌ ಹೊಡೆತಗಳಿಗೆ ತಕ್ಕ ಪ್ರತ್ಯುತ್ತರ ನೀಡಿದರು. ಎನ್‌ಗುಯೆನ್ ಮಾಡಿದ ತಪ್ಪುಗಳೂ ಪ್ರಿಯಾಂಶು ಅವರಿಗೆ ವರವಾದವು. ಆರಂಭದ ಒಂದಷ್ಟು ಹೊತ್ತಿನ ಪೈಪೋಟಿಯ ಬಳಿಕ ಮೊದಲ ಗೇಮ್‌ನ ವಿರಾಮದ ವೇಳೆಗೆ ಪ್ರಿಯಾಂಶು 11–9ರ ಮುನ್ನಡೆ ಸಾಧಿಸಿದರು. ನಂತರ ರ‍್ಯಾಲಿಗಳಲ್ಲಿ ಪ್ರಾಬಲ್ಯ ಮೆರೆದ ಅವರಿಗೆ 17–11ರ ಮೇಲುಗೈ ಸಿಕ್ಕಿತು. ಅದೇ ಲಯದೊಂದಿಗೆ ಗೇಮ್ ತಮ್ಮದಾಗಿಸಿಕೊಂಡರು. ಎರಡನೇ ಗೇಮ್‌ನಲ್ಲಿ ಪ್ರಿಯಾಂಶು ಮತ್ತಷ್ಟು ಚುರುಕಿನ ಆಟವಾಡಿದರು. ಬಿರುಸಿನ ಸ್ಮ್ಯಾಷ್‌ಗಳ ಬಲದಿಂದ ವಿರಾಮದ ವೇಳೆಗೆ 11–3ರಿಂದ ಮುನ್ನಡೆ ಗಳಿಸಿದರು. ಬ್ಯಾಕ್‌ಹ್ಯಾಂಡ್‌ ಹೊಡೆತಗಳನ್ನು ಹೆಚ್ಚು ಪ್ರಯೋಗಿಸಿದ ಭಾರತದ ಆಟಗಾರ ಗೇಮ್‌ ಹಾಗೂ ಪಂದ್ಯ ಗೆದ್ದ ಸಂತಸದಲ್ಲಿ ಮಿಂದೆದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.