ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಶಿವ ಥಾಪಾ, ದೀಪಕ್‌ ಭೋರಿಯಾ ಕಣದಲ್ಲಿ ನವದೆಹಲಿ: ಆರು ಬಾರಿಯ ಏಷ್ಯಾ ಚಾಂಪಿಯನ್‌ಷಿಪ್‌ ಪದಕ ವಿಜೇತ ಶಿವ ಥಾಪಾ ಹಾಗೂ ದೀಪಕ್ ಭೋರಿಯಾ ಅವರು ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಲಿರುವ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದು, ಪ್ರಮುಖ ಆಕರ್ಷಣೆ ಎನಿಸಿದ್ದಾರೆ. ವಿಶ್ವ ಚಾಂಪಿಯನ್‌ಷಿಪ್‌ ಏಪ್ರಿಲ್‌ 30ರಿಂದ ಮೇ 14ರವರೆಗೆ ಉಜ್ಬೆಕಿಸ್ತಾನದ ತಾಷ್ಕೆಂಟ್‌ನಲ್ಲಿ ನಿಗದಿಯಾಗಿದ್ದು, 13 ಬಾಕ್ಸರ್‌ಗಳ ತಂಡವನ್ನು ಶನಿವಾರ ಪ್ರಕಟಿಸಲಾಗಿದೆ. ಶಿವ ಅವರು 2015ರ ದೋಹಾ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗೆದ್ದಿದ್ದರು. 63.5 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲಿರುವ ಈಗ ಮತ್ತೊಂದು ಗರಿ ಮುಡಿಗೇರಿಸಿಕೊಳ್ಳಲು ಯತ್ನಿಸಲಿದ್ದಾರೆ. ಇತ್ತೀಚೆಗೆ ಉತ್ತಮ ಪ್ರದರ್ಶನದಿಂದ ಗಮನಸೆಳೆದಿರುವ ದೀಪಕ್‌, 51 ಕೆಜಿ ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ. 2021ರ ಸ್ಟ್ರಾಂಜಾ ಮೆಮೊರಿಯಲ್‌ ಟೂರ್ನಿಯಲ್ಲಿ ಅವರು 2016ರ ರಿಯೊ ಒಲಿಂಪಿಕ್ಸ್ ಚಿನ್ನ ವಿಜೇತ ಮತ್ತು 2019ರ ವಿಶ್ವ ಚಾಂಪಿಯನ್‌, ಉಜ್ಬೆಕಿಸ್ತಾನದ ಶಕೊಬಿದಿನ್‌ ಜೊಯಿರೊವ್ ಅವರನ್ನು ಸೋಲಿಸುವ ಮೂಲಕ ವಿಶ್ವಮಟ್ಟದಲ್ಲಿ ಸುದ್ದಿಯಾಗಿದ್ದರು. ಮೊಹಮ್ಮದ್ ಹುಸಾಮುದ್ದೀನ್‌ (57 ಕೆಜಿ) ತಂಡದಲ್ಲಿರುವ ಇನ್ನೋರ್ವ ಪ್ರಮುಖ ಬಾಕ್ಸರ್ ಆಗಿದ್ದಾರೆ. ‘ಪುರುಷರ ತಂಡವು ಕಠಿಣ ತರಬೇತಿ ನಡೆಸಿದೆ. ಪ್ರತಿಯೊಬ್ಬರೂ ದೇಶವು ಹೆಮ್ಮೆ ಪಡುವಂತೆ ಮಾಡುತ್ತಾರೆ ಎಂಬ ವಿಶ್ವಾಸವಿದೆ. ಅವರಿಗೆ ಶುಭ ಕೋರುವೆ‘ ಎಂದು ಭಾರತ ಬಾಕ್ಸಿಂಗ್ ಫೆಡರೇಷನ್‌ (ಬಿಎಫ್‌ಐ) ಅಧ್ಯಕ್ಷ ಅಜಯ್ ಸಿಂಗ್ ಹೇಳಿದ್ದಾರೆ. ಭಾರತ ತಂಡವು ಏಪ್ರಿಲ್‌ 17ರಂದು ತಾಷ್ಕೆಂಟ್‌ಗೆ ತೆರಳಲಿದ್ದು, ವಿಶ್ವ ಚಾಂಪಿಯನ್‌ಷಿಪ್‌ಗೂ ಮೊದಲು ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲಿದೆ. ಭಾರತ ತಂಡ ಇಂತಿದೆ: ಗೋವಿಂದ್ ಸಾಹ್ನಿ (48 ಕೆಜಿ ವಿಭಾಗ), ದೀಪಕ್ ಭೋರಿಯಾ (51 ಕೆಜಿ), ಸಚಿನ್ ಸಿವಾಚ್ (54 ಕೆಜಿ), ಮೊಹಮ್ಮದ್ ಹುಸಾಮುದ್ದೀನ್ (57 ಕೆಜಿ), ವರಿಂದರ್ ಸಿಂಗ್ (60 ಕೆಜಿ), ಶಿವ ಥಾಪಾ (63.5 ಕೆಜಿ), ಆಕಾಶ್ ಸಂಗ್ವಾನ್ (67 ಕೆಜಿ), ನಿಶಾಂತ್ ದೇವ್ (71 ಕೆಜಿ), ಸುಮಿತ್ ಕುಂದು (75 ಕೆಜಿ), ಆಶಿಶ್ ಚೌಧರಿ (80 ಕೆಜಿ), ಹರ್ಷ್ ಚೌಧರಿ (86 ಕೆಜಿ), ನವೀನ್ ಕುಮಾರ್ (92 ಕೆಜಿ) ಮತ್ತು ನರೇಂದರ್ ಬರ್ವಾಲ್ (92+ ಕೆಜಿ). ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.