ಆರ್ಮಗೆಡನ್‌ ಚೆಸ್‌: ಗುಕೇಶ್‌ಗೆ ಪ್ರಶಸ್ತಿ ಬರ್ಲಿನ್‌: ಮಾಜಿ ವಿಶ್ವ ರ್‍ಯಾಪಿಡ್‌ ಚೆಸ್‌ ಚಾಂಪಿಯನ್‌ ನಾದಿರ್ಬೆಕ್ ಅಬ್ದುಸತ್ತಾರೊವ್‌ ಅವರನ್ನು ಅನಿರೀಕ್ಷಿತವಾಗಿ ಸೋಲುಣಿಸಿದ ಭಾರತದ ಗ್ರ್ಯಾಂಡ್‌ಮಾಸ್ಟರ್‌ ಡಿ.ಗುಕೇಶ್, ವಿಶ್ವ ಆರ್ಮಗೆಡನ್‌ ಏಷ್ಯ–ಒಷಾನಿಯಾ ಗುಂಪಿನ ಸ್ಪರ್ಧೆಯನ್ನು ಗೆದ್ದುಕೊಂಡರು. 16 ವರ್ಷದ ಗುಕೇಶ್ ಜೊತೆಗೆ ಉಜ್ಬೇಕಿಸ್ತಾನದ ಸತ್ತಾರೊವ್‌, ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಆರ್ಮಗೆಡನ್‌ ಗ್ರ್ಯಾಂಡ್‌ ಫಿನಾಲೆಯಲ್ಲಿ ಆಡುವ ಅರ್ಹತೆ ಸಂಪಾದಿಸಿಕೊಂಡರು. ಫೈನಲ್‌ ಭಾನುವಾರ ತಡರಾತ್ರಿ ನಡೆಯಿತು. ಕಣ ಪ್ರಬಲವಾಗಿದ್ದು ಗುಕೇಶ್‌, ಸತ್ತಾರೊವ್‌ ಜೊತೆಗೆ ಮಾಜಿ ವಿಶ್ವ ಚಾಂಪಿಯನ್‌ ವ್ಲಾದಿಮಿರ್‌ ಕ್ರಾಮ್ನಿಕ್‌, ಡೇನಿಯಲ್ ಡುಬೋವ್‌, ಯಾಂಗ್‌ಯಿ ಯು (ಚೀನಾ), ವಿದಿತ್‌ ಎಸ್‌.ಗುಜರಾತಿ ಮತ್ತು ಕಾರ್ತಿಕೇಯನ್‌ ಮುರಳಿ (ಇಬ್ಬರೂ ಭಾರತ), ಪರಮ್‌ ಮಗ್‌ಸೂಡ್ಲೂ (ಇರಾನ್‌) ಸಹ ಇದ್ದರು. ‘ವಿಶ್ವ ಚೆಸ್‌ ಏಷ್ಯಾ–ಒಷಾನಿಯಾ ಗುಂಪಿನ ರೋಚಕ ಹಣಾಹಣಿ ಗೆದ್ದುಕೊಂಡು ಸಂತಸವಾಗಿದೆ. ವೇಗದ ಟೈಮ್‌ ಕಂಟ್ರೋಲ್‌ ಇರುವ ಸ್ಪರ್ಧೆಯಲ್ಲಿ ಕೊನೆಗೂ ಗೆದ್ದು ನಿರಾಳವೆನಿಸಿದೆ. ಟೂರ್ನಿಯಲ್ಲಿ ಸಾಕಷ್ಟು ಅನುಭವ ಗಳಿಸಿದೆ’ ಎಂದು ಟ್ವೀಟ್‌ನಲ್ಲಿ ಗುಕೇಶ್ ತಿಳಿಸಿದ್ದಾರೆ. ಗುಕೇಶ್ ಅವರನ್ನು ಅಭಿನಂದಿಸಿ ಭಾರತದ ಚೆಸ್‌ ದಿಗ್ಗಜ ವಿಶ್ವನಾಥನ್‌ ಆನಂದ್‌ ಕೂಡ ಟ್ವೀಟ್ ಮಾಡಿದ್ದಾರೆ. ಏನಿದು ಆರ್ಮಗೆಡನ್‌: ಈ ಟೂರ್ನಿಯಲ್ಲಿ ಪ್ರತಿ ದಿನ ಆಟಗಾರನೊಬ್ಬ ಎರಡು ಬ್ಲಿಟ್ಜ್‌ ಗೇಮ್‌ ಆಡಬೇಕಾಗುತಿತ್ತು. ಸ್ಕೋರ್‌ ಸಮನಾದಲ್ಲಿ ‘ಆರ್ಮಗೆಡನ್‌’ (ಇದು ಬ್ಲಿಟ್ಜ್‌ ಮಾದರಿಯ ವೇರಿಯಂಟ್‌) ಆಟ ಆಡಬೇಕಾಗಿತ್ತು. ಇದರಲ್ಲಿ ಬಿಳಿ ಕಾಯಿಗಳಲ್ಲಿ ಆಡುವ ಆಟಗಾರನಿಗೆ ಐದು ನಿಮಿಷ, ಕಪ್ಪು ಕಾಯಿಗಳಲ್ಲಿ ಆಡುವ ಆಟಗಾರನಿಗೆ ನಾಲ್ಕು ನಿಮಿಷಗಳ ಅವಧಿ ನೀಡಲಾಗುತ್ತದೆ. ಆರ್ಮ್‌ಗೆಡನ್‌ನಲ್ಲಿ ಆಟ ಒಂದೊಮ್ಮೆ ‘ಡ್ರಾ’ ಆದಲ್ಲಿ ಅದನ್ನು ಕಪ್ಪುಕಾಯಿಗಳಲ್ಲಿ ಆಡುವ ಆಟಗಾರನಿಗೆ ಗೆಲುವು ಎಂದು ಪರಿಗಣಿಸಲಾಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.