ಕೊಡವ ಕೌಟುಂಬಿಕ ಹಾಕಿ ಟೂರ್ನಿ: ಕುಪ್ಪಂಡಕ್ಕೆ ಅಪ್ಪಚೆಟ್ಟೋಳಂಡ ಕಪ್ ನಾಪೋಕ್ಲು (ಕೊಡಗು ಜಿಲ್ಲೆ): ಕುಪ್ಪಂಡ ತಂಡದವರು ಪೆನಾಲ್ಟಿ ಶೂಟೌಟ್‌ನಲ್ಲಿ ಕುಲ್ಲೆಟಿರ ತಂಡದ ವಿರುದ್ಧ ಗೆಲುವು ಸಾಧಿಸಿ ಅಪ್ಪಚೆಟ್ಟೋಳಂಡ ಕಪ್‌ಗೆ ಮುತ್ತಿಕ್ಕಿದರು. ಇದೇ ಮೊದಲ ಬಾರಿ ಕೊಡವ ಕೌಟುಂಬಿಕ ಹಾಕಿ ಟೂರ್ನಿಯ ಚಾಂಪಿಯನ್ ಆಗಿ ಹೊರಹೊಮ್ಮಿದರು. ಚರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಈ ಹಿಂದೆ ಮೂರು ಸಲ ಚಾಂಪಿಯನ್‌ ಆಗಿದ್ದ ಕುಲ್ಲೆಟಿರ ತಂಡವನ್ನು ಮಣಿಸಿದರು. ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದ ಆರಂಭದಲ್ಲಿ ಎರಡೂ ತಂಡಗಳು ತಲಾ ಒಂದು ಗೋಲು ಗಳಿಸಿ ಸಮಬಲ ಸಾಧಿಸಿದ್ದವು. ಕುಪ್ಪಂಡ ಸೋಮಯ್ಯ ಹಾಗೂ ಕುಲ್ಲೇಟಿರ ಅವನೀಶ್ ತಂಡದ ಪರವಾಗಿ ಒಂದೊಂದು ಗೋಲು ಹೊಡೆದಿದ್ದರು. ನಂತರ, ಪೆನಾಲ್ಟಿ ಶೂಟ್‌ಔಟ್‌ನಲ್ಲಿ ಕುಪ್ಪಂಡ (ಕೈಕೇರಿ) ತಂಡದವರು 4-2 ಗೋಲುಗಳಿಂದ ಕುಲ್ಲೇಟಿರ ತಂಡದವರ ವಿರುದ್ಧ ಗೆಲುವು ಸಾಧಿಸಿದರು. ವಿಜೇತ ಕುಪ್ಪಂಡ ತಂಡದ ಆಟಗಾರರಿಗೆ ₹ 3 ಲಕ್ಷ ನಗದು ಹಾಗೂ ಟ್ರೋಫಿ ನೀಡಲಾಯಿತು. ಹಾಕಿ ಅಕಾಡೆಮಿಯ ಸಿಲ್ವರ್ ರೋಲಿಂಗ್ ಟ್ರೋಫಿಯೂ ವಿಜೇತ ತಂಡದ ಪಾಲಾಯಿತು. ರನ್ನರ್ಸ್ ಅಪ್‌ ಕುಲ್ಲೇಟಿರ ತಂಡದ ಆಟಗಾರರು ₹ 2 ಲಕ್ಷ ನಗದು ಹಾಗೂ ಟ್ರೋಫಿ ಪಡೆದರು. 3ನೇ ಹಾಗೂ 4ನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ನೆಲ್ಲಮಕ್ಕಡ ತಂಡದವರು 1-0 ಗೋಲಿನಿಂದ ಪಳಂಗಂಡ ವಿರುದ್ದ ಗೆಲುವು ಸಾಧಿಸಿದರು. ನೆಲ್ಲಮಕ್ಕಡ ತಂಡಕ್ಕೆ ₹ 1 ಲಕ್ಷ ನಗದು ಹಾಗೂ ಟ್ರೋಫಿ, 4ನೇ ಸ್ಥಾನ ಪಡೆದ ಪಳಂಗಂಡ ತಂಡಕ್ಕೆ ₹ 50 ಸಾವಿರ ನಗದು ಹಾಗೂ ಟ್ರೋಫಿ ವಿತರಿಸಲಾಯಿತು. ವೈಯಕ್ತಿಕ ಪ್ರಶಸ್ತಿಗಳು: ಟೂರ್ನಿಯ ಶ್ರೇಷ್ಠ ಆಟಗಾರ;ಕುಪ್ಪಂಡ ಸೋಮಯ್ಯ. ಪಂದ್ಯ ಶ್ರೇಷ್ಠ;ಕುಲ್ಲೇಟಿರ ಅವನೀಶ್. ಅತ್ಯುತ್ತಮ ಆಟಗಾರ: ನೆಲ್ಲಮಕ್ಕಡ ಸೋಮಯ್ಯ ಅತ್ಯುತ್ತಮ ಆಟಗಾರ್ತಿ:ನಾಪಂಡ ಸೌಮ್ಯಾ ಅತ್ಯುತ್ತಮ ಗೋಲ್ ಕೀಪರ್: ಕುಲ್ಲೇಟಿರ ವಚನ್ ಕಾಳಪ್ಪ ಟೂರ್ನಿಯ ಉದಯೋನ್ಮುಖ ಆಟಗಾರ:ಕುಪ್ಪಂಡ ನಾಚಪ್ಪ ಉತ್ತಮ ಕುಟುಂಬ ತಂಡ:ಮುಕ್ಕಾಟಿರ (ಕಡಗದಾಳು) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.