5 ಕ್ರೀಡಾಂಗಣ ಅಭಿವೃದ್ಧಿಗೆ ಬಿಸಿಸಿಐ ಯೋಜನೆ ನವದೆಹಲಿ (ಪಿಟಿಐ): ಬರುವ ಅಕ್ಟೋಬರ್‌– ನವೆಂಬರ್‌ನಲ್ಲಿ ನಿಗದಿಯಾಗಿರುವ ಏಕದಿನ ಕ್ರಿಕೆಟ್‌ ವಿಶ್ವಕಪ್‌ ದೃಷ್ಟಿಯಲ್ಲಿಟ್ಟು ಕೊಂಡು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (ಬಿಸಿಸಿಐ) ಕನಿಷ್ಠ ಐದು ಕ್ರೀಡಾಂಗಣಗಳನ್ನು ದೊಡ್ಡ ಪ್ರಮಾಣದಲ್ಲಿ ನವೀಕರಿಸಲು ಯೋಜನೆ ಹಾಕಿಕೊಂಡಿದೆ. ಇದಕ್ಕಾಗಿ ₹500 ಕೋಟಿ ವೆಚ್ಚ ಮಾಡಲು ಉದ್ದೇಶಿಸಿದೆ. ಆಟದ ಜನಪ್ರಿಯತೆಯಿಂದಾಗಿ ಬಿಸಿಸಿಐಗೆ ಭಾರಿ ಪ್ರಮಾಣದಲ್ಲಿ ಆದಾಯ ಹರಿದುಬರುತ್ತಿದೆ. ಶ್ರೀಮಂತ ಕ್ರಿಕೆಟ್‌ ಸಂಸ್ಥೆ ಎಂಬ ಹೆಗ್ಗಳಿಕೆಗೆ ಬಿಸಿಸಿಐ ಪಾತ್ರವಾಗಿದೆ. ಆದರೆ, ಟಿಕೆಟ್‌ ಖರೀದಿಸಿ ಬರುವ ಪ್ರೇಕ್ಷಕರು ಹೆಚ್ಚಿನ ಕ್ರೀಡಾಂಗಣಗಳಲ್ಲಿ ಸಮರ್ಪಕ ಸೌಕರ್ಯಗಳಿಂದ ವಂಚಿತರಾಗುತ್ತಿದ್ದಾರೆ. ಫೆಬ್ರುವರಿ –ಮಾರ್ಚ್‌ ತಿಂಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ ಸರಣಿಯ ವೇಳೆ, ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಸ್ವಚ್ಛತೆಯಿಲ್ಲದ ಶೌಚಾಲಯದ ದುರವಸ್ಥೆ ಕಂಡು ಪ್ರೇಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ನವೀಕರಣಕ್ಕೆ ಉದ್ದೇಶಿಸಿರುವ ಐದು ಕ್ರೀಡಾಂಗಣದಲ್ಲಿ ದೆಹಲಿ ಕ್ರೀಡಾಂಗಣವೂ ಒಂದಾಗಿದೆ. ಈಗಿರುವ ವ್ಯವಸ್ಥೆ ಮತ್ತು ಮಾದರಿ ಕ್ರೀಡಾಂಗಣ ಹೇಗಿರಬೇಕೆಂಬ ವಿಶ್ಲೇ ಷಣೆ ನಡೆಸಿ ಕ್ರೀಡಾಂಗಣಗಳ ಪಟ್ಟಿ ಮಾಡಲಾಗಿದೆ. ಪಿಟಿಐಗೆ ಲಭ್ಯವಾಗಿರುವ ಪಟ್ಟಿಯಲ್ಲಿ, ದೆಹಲಿಯ ಜೊತೆ ಹೈದರಾ ಬಾದ್‌, ಕೋಲ್ಕತ್ತ, ಮೊಹಾಲಿ ಮತ್ತು ಮುಂಬೈನ ಕ್ರೀಡಾಂಗಣಗಳ ಹೆಸರು ಇದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲೂ ನೈರ್ಮಲ್ಯ ಕಾಪಾಡದಿರುವ ಬಗ್ಗೆಯೂ ಪ್ರೇಕ್ಷಕರು ದೂರಿದ್ದರು. ದೆಹಲಿ ಕ್ರೀಡಾಂಗಣದ ನವೀಕ ರಣಕ್ಕೆ ₹100 ಕೋಟಿ, ಹೈದರಾ ಬಾದ್‌ನ ಕ್ರೀಡಾಂಗಣಕ್ಕೆ ಹೊಸರೂಪ ನೀಡಲು ₹117.17 ಕೋಟಿ, ಕೋಲ್ಕತ್ತದ ಈಡನ್‌ ಗಾರ್ಡನ್‌ ಕ್ರೀಡಾಂಗಣಕ್ಕೆ 124.47 ಕೋಟಿ, ಮೊಹಾಲಿಯ ಕ್ರೀಡಾಂಗಣಕ್ಕೆ ₹78.82 ಕೋಟಿ ವೆಚ್ಚವಾಗಲಿದೆ. ಚಾವಣಿಯ ಕೆಲಸಕ್ಕೆ ಕೈಹಾಕಿದ್ದಲ್ಲಿ ಈ ವೆಚ್ಚ ಇನ್ನೂ ಹೆಚ್ಚಲಿದೆ.# ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.