ಬ್ಯಾಸ್ಕೆಟ್‌ಬಾಲ್‌ ದಿಗ್ಗಜ ಮೈಕಲ್ ಜೋರ್ಡನ್‌ ಶೂಗೆ ₹ 18 ಕೋಟಿ! ನ್ಯೂಯಾರ್ಕ್‌: ಬ್ಯಾಸ್ಕೆಟ್‌ಬಾಲ್‌ ದಿಗ್ಗಜ ಅಮೆರಿಕದ ಮೈಕಲ್‌ ಜೋರ್ಡನ್‌ ಅವರು 1998ರ ಎನ್‌ಬಿಎ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಧರಿಸಿದ್ದ ಶೂಗಳು ಹರಾಜಿನಲ್ಲಿ ದಾಖಲೆಯ ₹ 18 ಕೋಟಿಗೆ ಮಾರಾಟವಾಗಿವೆ ಎಂದು ನ್ಯೂಯಾರ್ಕ್‌ನ ಸೋದೆಬೀಸ್‌ ಹರಾಜು ಸಂಸ್ಥೆ ತಿಳಿಸಿದೆ. ಜೋರ್ಡನ್‌ ಅವರ ವೃತ್ತಿಜೀವನದ ಕೊನೆಯ ಟೂರ್ನಿ ಅದಾಗಿತ್ತು. ಷಿಕಾಗೊ ಬುಲ್ಸ್‌ ತಂಡವನ್ನು ಪ್ರತಿನಿಧಿಸಿದ್ದ ಅವರು ಯೂಟಾ ಜಾಝ್‌ ತಂಡದ ವಿರುದ್ಧದ ಫೈನಲ್‌ನಲ್ಲಿ 37 ಪಾಯಿಂಟ್ಸ್‌ ಕಲೆಹಾಕಿದ್ದರು. ಪಂದ್ಯವನ್ನು ಬುಲ್ಸ್‌ 93–88 ಪಾಯಿಂಟ್ಸ್‌ಗಳಿಂದ ಜಯಿಸಿತ್ತು. ಆ ಪಂದ್ಯದಲ್ಲಿ ಜೋರ್ಡನ್‌ ಇತರ ಜತೆ ಶೂಗಳನ್ನೂ ಧರಿಸಿದ್ದರು. ಅವರು ಕೊನೆಯದಾಗಿ ಧರಿಸಿದ್ದ ಶೂಗಳನ್ನು ಹರಾಜಿಗೆ ಇಡಲಾಗಿತ್ತು ಎಂದು ಸೋದೆಬೀಸ್‌ ಹೇಳಿದೆ. ಸೋದೆಬೀಸ್‌ ಸಂಸ್ಥೆ ನಡೆಸಿದ ಹರಾಜಿನಲ್ಲಿ ಶೂಗಳು ಇಷ್ಟೊಂದು ದೊಡ್ಡ ಮೊತ್ತಕ್ಕೆ ಮಾರಾಟವಾಗಿದ್ದು ಇದೇ ಮೊದಲು. ಅಮೆರಿಕದ ಗಾಯಕ ಕಾನ್ಯೆ ವೆಸ್ಟ್‌ ಅವರ ಶೂಗಳು 2021 ರಲ್ಲಿ ನಡೆದಿದ್ದ ಹರಾಜಿನಲ್ಲಿ ₹ 14.74 ಕೋಟಿ ಮೊತ್ತಕ್ಕೆ ಮಾರಾಟವಾಗಿದ್ದು ಇದುವರೆಗಿನ ದಾಖಲೆಯಾಗಿತ್ತು. ಜೋರ್ಡನ್‌ ಅವರು 1998ರ ಫೈನಲ್‌ನಲ್ಲಿ ಧರಿಸಿದ್ದ ಜೆರ್ಸಿ ಕಳೆದ ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಹರಾಜಿನಲ್ಲಿ ₹ 82 ಕೋಟಿ ಮೊತ್ತಕ್ಕೆ ಮಾರಾಟವಾಗಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.