ಬ್ರಿಜ್‌ಭೂಷಣ್‌ ವಿರುದ್ಧದ ಆರೋಪ ಸಾಬೀತಾಗದು: ವರದಿ ನವದೆಹಲಿ: ಭಾರತ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪಗಳನ್ನು ಸಾಬೀತುಪಡಿಸಲು ಸ್ಪಷ್ಟ ಸಾಕ್ಷ್ಯಗಳು ಲಭ್ಯವಾಗಿಲ್ಲ ಎಂದು ತಿಳಿದುಬಂದಿದೆ. ದೇಶದ ಪ್ರಮುಖ ಮಹಿಳಾ ಕುಸ್ತಿಪಟುಗಳು ಡಬ್ಲ್ಯುಎಫ್‌ಐ ಅಧ್ಯಕ್ಷರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಆ ಕುರಿತು ತನಿಖೆ ಮಾಡಲು ಬಾಕ್ಸರ್ ಎಂಸಿ ಮೇರಿ ಕೋಮ್ ನೇತೃತ್ವದಲ್ಲಿ ಏಳು ಸದಸ್ಯರ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಯು ಏಪ್ರಿಲ್ ಮೊದಲ ವಾರದಲ್ಲಿ ತನ್ನ ವರದಿ ಸಲ್ಲಿಸಿದೆ. ‘ಸಮಿತಿಯು ಮಹಿಳಾ ಕುಸ್ತಿಪಟುಗಳನ್ನು ಹಲವು ಸುತ್ತಿನ ವಿಚಾರಣೆಗೆ ಒಳ‍ಪಡಿಸಿದೆ. ಬ್ರಿಜ್ ಭೂಷಣ್ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಅವರಿಗೆ ಸಾಧ್ಯವಾಗಿಲ್ಲ’ ಎಂದು ಮೂಲಗಳು ತಿಳಿಸಿವೆ. 'ಕಳೆದ ವರ್ಷ ಬಲ್ಗೇರಿಯದಲ್ಲಿ ನಡೆದಿದ್ದ ಸ್ಪರ್ಧೆಯೊಂದರ ವೇಳೆ ಬ್ರಿಜ್‌ಭೂಷಣ್‌ ಅವರು ಬೆನ್ನುನೋವು ಶಮನಕ್ಕೆ ಮಸಾಜ್‌ ಮಾಡುವಂತೆ ಮಹಿಳಾ ಫಿಸಿಯೊ ಒಬ್ಬರಲ್ಲಿ ಕೇಳಿಕೊಂಡಿದ್ದರು ಎಂದು ಆರೋಪಿಸಲಾಗಿತ್ತು. ಆದರೆ ಅಂತಹ ಘಟನೆ ನಡೆದೇ ಇಲ್ಲ ಎಂದು ಅದೇ ಮಹಿಳಾ ಫಿಸಿಯೊ ತನಿಖಾ ಸಮಿತಿ ಮುಂದೆ ತಿಳಿಸಿದ್ದಾರೆ’ ಎಂದು ಮೂಲಗಳು ಖಚಿತಪಡಿಸಿವೆ. ವಿನೇಶಾ ಫೋಗಟ್ ಮತ್ತು ಸಾಕ್ಷಿ ಮಲಿಕ್‌ ಅವರು ತಮ್ಮ ಹೇಳಿಕೆಯನ್ನು ಸಮಿತಿಗೆ ಲಿಖಿತವಾಗಿ ಸಲ್ಲಿಸಿದ್ದರು. ಆದರೆ ಇಬ್ಬರೂ ತಪ್ಪು ಮಾಹಿತಿ ನೀಡಿದ್ದಾಗಿ ತಿಳಿದುಬಂದಿದೆ. ‘2015 ರಲ್ಲಿ ಟರ್ಕಿಗೆ ತೆರಳಿದ್ದಾಗ ಬ್ರಿಜ್‌ಭೂಷಣ್‌ ನನ್ನನ್ನು ಅನುಚಿತವಾಗಿ ಸ್ಪರ್ಶಿಸಿದ್ದರು ಎಂದು ವಿನೇಶಾ ತಮ್ಮ ಅಫಿಡವಿಟ್‌ನಲ್ಲಿ ಆರೋಪಿಸಿದ್ದರು. ಆದರೆ ವಿನೇಶಾ ಆ ವರ್ಷ ಟರ್ಕಿಯಲ್ಲಿ ನಡೆದಿದ್ದ ಸ್ಪರ್ಧೆಯಲ್ಲಿ ಪಾಲ್ಗೊಂಡಿರಲೇ ಇಲ್ಲ. ಆ ಬಳಿಕ ತಮ್ಮ ಹೇಳಿಕೆ ಬದಲಿಸಿದ್ದ ವಿನೇಶಾ, ಘಟನೆಯು 2016 ರಲ್ಲಿ ಮಂಗೋಲಿಯದಲ್ಲಿ ನಡೆದಿತ್ತು ಎಂದಿದ್ದರು’ ಎಂಬುದಾಗಿ ಮೂಲಗಳು ಹೇಳಿವೆ. ‘2015 ರಲ್ಲಿ ಬ್ರಿಜ್‌ಭೂಷಣ್‌ ತಮ್ಮನ್ನು ತಬ್ಬಿಕೊಂಡಿದ್ದಾಗಿ ಸಾಕ್ಷಿ ಅವರು ಅಫಿಡವಿಟ್‌ನಲ್ಲಿ ಹೇಳಿದ್ದರು. ಆದರೆ ತಂದೆಯ ಸ್ಥಾನದಲ್ಲಿ ನಿಂತು ತಬ್ಬಿಕೊಂಡದ್ದಾಗಿ ಬ್ರಿಜ್‌ಭೂಷಣ್‌ ಸಾಕ್ಷಿಗೆ ತಿಳಿಸಿದ್ದರು’ ಎಂಬ ಮಾಹಿತಿಯೂ ವರದಿಯಲ್ಲಿದೆ ಎನ್ನಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.