ಬ್ರಿಜ್‌ಭೂಷಣ್‌ ವಿರುದ್ಧದ ಆರೋಪ: ಮತ್ತೆ ಪ್ರತಿಭಟನೆಗಿಳಿದ ಕುಸ್ತಿಪಟುಗಳು ನವದೆಹಲಿ: ಭಾರತ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್‌ಭೂಷಣ್‌ ಶರಣ್‌ ಸಿಂಗ್ ಮೇಲಿನ ಲೈಂಗಿಕ ದೌರ್ಜನ್ಯ ಆರೋಪಗಳ ಕುರಿತ ತನಿಖೆಯ ವರದಿಯನ್ನು ಬಹಿರಂಗಪಡಿಸಬೇಕೆಂದು ಒತ್ತಾಯಿಸಿ ಬಜರಂಗ್ ಪೂನಿಯಾ, ವಿನೇಶಾ ಪೋಗಟ್‌ ಸೇರಿದಂತೆ ದೇಶದ ಪ್ರಮುಖ ಕುಸ್ತಿಪಟುಗಳು ಭಾನುವಾರ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದರು. ಬಿಗಿ ಪೊಲೀಸ್‌ ಬಂದೋಬಸ್ತ್ ಮಧ್ಯೆ ಕುಸ್ತಿಪಟುಗಳು, ಬಿಜೆಪಿ ಸಂಸದರೂ ಆಗಿರುವ ಬ್ರಿಜ್‌ಭೂಷಣ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿದರು. ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಬ್ರಿಜ್‌ಭೂಷಣ್ ವಿರುದ್ಧ ಈ ವರ್ಷ ಜನವರಿಯಲ್ಲಿ ಕುಸ್ತಿಪಟುಗಳು ಧರಣಿ ನಡೆಸಿದ್ದರು. ಫೆಡರೇಷನ್‌ಅನ್ನು ವಿಸರ್ಜಿಸಬೇಕೆಂದು ಒತ್ತಾಯಿಸಿದ್ದರು. ಆದರೆ ತಮ್ಮ ಮೇಲಿನ ಎಲ್ಲ ಆರೋಪಗಳನ್ನು ಬ್ರಿಜ್‌ಭೂಷಣ್ ಅಲ್ಲಗಳೆದಿದ್ದರು. ಈ ಕುರಿತು ತನಿಖೆಗಾಗಿ ಬಾಕ್ಸರ್ ಮೇರಿ ಕೋಮ್ ನೇತೃತ್ವದಲ್ಲಿ ಮೇಲುಸ್ತುವಾರಿ ಸಮಿತಿ ರಚಿಸಲಾಗಿತ್ತು. ಏಪ್ರಿಲ್‌ ಮೊದಲ ವಾರದಲ್ಲಿ ಸಮಿತಿಯು ತನ್ನ ವರದಿಯನ್ನು ಸಲ್ಲಿಸಿದೆ. ಆದರೆ ಸರ್ಕಾರ ಅದನ್ನು ಇನ್ನೂ ಬಹಿರಂಗಗೊಳಿಸಿಲ್ಲ. ‘ಸರ್ಕಾರ ಈ ವರದಿಯನ್ನು ಬಹಿರಂಗಗೊಳಿಸುವದು ಯಾವಾಗ? ಈಗಾ ಗಲೇ ಮೂರು ತಿಂಗಳಾಯಿತು. ದೂರು ಕೊಟ್ಟಿರುವ ಮಹಿಳಾ ಕುಸ್ತಿಪಟುಗಳು ಸತ್ತ ಮೇಲೆ ವರದಿ ಬಿಡುಗಡೆ ಆಗಲಿ ದೆಯೇ’ ಎಂದು ವಿನೇಶಾ ಪೋಗಟ್‌ ಖಾರವಾಗಿ ಪ್ರಶ್ನಿಸಿದ್ದಾರೆ. ‘ಡಬ್ಲ್ಯುಎಫ್ಐ ಚುನಾವಣಾ ಪ್ರಕ್ರಿಯೆಯಿಂದ ನಮಗೇನೂ ಆಗ ಬೇಕಿಲ್ಲ. ನಮ್ಮ ವೃತ್ತಿಜೀವನದ ಕುರಿತು ಚಿಂತೆಯಾಗಿದೆ. ಮುಂದಿನ ವರ್ಷ ಪ್ಯಾರಿಸ್‌ ಒಲಿಂಪಿಕ್ಸ್ ಇದ್ದು, ಆದಷ್ಟು ಶೀಘ್ರ ಸಿದ್ಧತೆಗೆ ಮರಳಬೇಕು’ ಎಂದು ವಿನೇಶಾ ಹೇಳಿದ್ದಾರೆ. ಡಬ್ಲ್ಯುಎಫ್‌ಐ ಅಧ್ಯಕ್ಷರಾಗಿ ಬ್ರಿಜ್‌ಭೂಷಣ್‌ 12 ವರ್ಷ ಕಾರ್ಯನಿರ್ವ ಹಿಸಿದ್ದಾರೆ. ಮೇ 7ರಂದು ನಡೆಯುವ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಹೇಳಿದ್ದಾರೆ. ಆದಾಗ್ಯೂ ಅವರು ಫೆಡರೇಷನ್‌ನೊಳಗೆ ಸ್ಥಾನ ಪಡೆಯುವ ಸೂಚನೆ ಕಂಡುಬಂದಿದೆ. ‘ಗಂಭೀರ ಆರೋಪಗಳಿದ್ದರೂ ಫೆಡರೇಷನ್‌ಅನ್ನು ಯಾರು ಮುನ್ನಡೆಸುತ್ತಿದ್ದಾರೆ ಎಂದು ಜನ ಗಮನಿಸುತ್ತಿದ್ದಾರೆ. ಸತ್ಯವೇ ನಮ್ಮ ಶಕ್ತಿ. ಆದರೆ ಅವರನ್ನು ಎದುರಿಸಲು ಅಷ್ಟು ಸಾಕಾಗುತ್ತಿಲ್ಲ. ಲೈಂಗಿಕ ದೌರ್ಜನ್ಯದ ಆರೋಪಗಳ ವಿರುದ್ಧವಾದರೂ ಸರ್ಕಾರ ಕ್ರಮ ಕೈಗೊಳ್ಳಬೇಕು. ನಾವು ನ್ಯಾಯ ಕೇಳುತ್ತಿದ್ದೇವೆ. ಪ್ರತಿಭಟನೆ ಮುಂದುವರಿಸುತ್ತೇವೆ’ ಎಂದು ವಿನೇಶಾ ಹೇಳಿದ್ದಾರೆ. ತನಿಖೆ ನಡೆಯುತ್ತಿದೆ;ಪೊಲೀಸ್‌: ಪ್ರತಿಭಟನೆ ನಡಸುತ್ತಿರುವವರಿಂದ ಏಳು ದೂರುಗಳು ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ದೆಹಲಿ ಪೊಲೀಸರು ಭಾನುವಾರ ಹೇಳಿದ್ದಾರೆ. ಆರೋಪಿಯ ಮೇಲೆ ಎಫ್‌ಐಆರ್‌ ದಾಖಲಿಸದಿದ್ದುದ್ದಕ್ಕಾಗಿ ದೆಹಲಿ ಮಹಿಳಾ ಆಯೋಗವು ಪೊಲೀಸರಿಗೆ ನೋಟಿಸ್‌ ನೀಡಿತ್ತು. ಎನ್‌ಸಿಪಿ ಬೆಂಬಲ: ಪ್ರತಿಭಟನಕಾರರಿಗೆ ಬೆಂಬಲ ವ್ಯಕ್ತಪಡಿಸಿರುವ ಶರದ್‌ ಪವಾರ್ ಅವರ ಎನ್‌ಸಿಪಿ ‘ಕುಸ್ತಿಪಟುಗಳ ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರ ಕ್ರಿಡಾ ಸಚಿವ ಅನುರಾಗ್ ಠಾಕೂರ್ ಅವರನ್ನು ಒತ್ತಾಯಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.