14ನೇ ಪಂದ್ಯ ಡ್ರಾ: ವಿಶ್ವ ಚೆಸ್‌ ಸಾಮ್ರಾಟ ನಿರ್ಧಾರ ಇಂದು ಅಸ್ತಾನಾ, ಕಜಕಸ್ತಾನ: ಗ್ರ್ಯಾಂಡ್‌ಮಾಸ್ಟರ್‌ಗಳಾದ ಡಿಂಗ್ ಲಿರೆನ್ ಮತ್ತು ಇಯಾನ್‌ ನಿಪೊಮ್‌ನಿಷಿ ನಡುವಣ ವಿಶ್ವ ಚೆಸ್‌ ಚಾಂಪಿಯನ್‌ಷಿಪ್‌ನ 14ನೇ ಹಾಗೂ ಅಂತಿಮ ಪಂದ್ಯ ಆರೂವರೆ ಗಂಟೆಗಳ ಸುದೀರ್ಘ ಹೋರಾಟ ಕಂಡರೂ ನಿರ್ಣಾಯಕ ಫಲಿತಾಂಶ ಹೊರಹೊಮ್ಮಲಿಲ್ಲ. ಶನಿವಾರ ನಡೆದ ಈ ಪಂದ್ಯ 90 ನಡೆಗಳ ನಂತರ ಡ್ರಾ ಆಯಿತು. ಸ್ಕೋರ್ 7–7 ಆಗಿದ್ದು, ವಿಶ್ವ ಚಾಂಪಿಯನ್ ಆಟಗಾರನನ್ನು ನಿರ್ಧರಿಸಲು ಈಗ ನಾಲ್ಕು ಟೈಬ್ರೇಕರ್‌ ಪಂದ್ಯಗಳ ಮೊರೆ ಹೋಗಬೇಕಾಗಿದೆ. ಭಾನುವಾರ ಈ ಟೈಬ್ರೇಕರ್‌ ಪಂದ್ಯಗಳು ನಡೆಯಲಿದೆ. ಒಂದು ವೇಳೆ ಅಲ್ಲೂ ಸ್ಕೋರ್ ಸಮನಾದಲ್ಲಿ ಬ್ಲಿಟ್ಜ್ ಪಂದ್ಯಗಳ ಮೂಲಕ ವಿಶ್ವ ಚಾಂಪಿಯನ್‌ ಆಟಗಾರನನ್ನು ನಿರ್ಧರಿಸಲಾಗುವುದು. ಬಿಳಿ ಕಾಯಿಗಳಲ್ಲಿ ಆಡಿದ ಲಿರೆನ್‌ ಅಂತಿಮ ಹಂತದಲ್ಲಿ ಒಂದು ಕಾಲಾಳು ಕಡಿಮೆ ಹೊಂದಿದ್ದರು. ಆದರೆ ನಿಪೊಮ್‌ನಿಷಿ ಗೆಲುವಿಗೆ ನಡೆಸಿದ ತಂತ್ರದಿಂದ ಪಾರಾಗುವಲ್ಲಿ ಕೊನೆಗೂ ಲಿರೆನ್‌ ಯಶಸ್ವಿಯಾದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.