ಕೊಡವ ಕೌಟುಂಬಿಕ ಹಾಕಿ ಟೂರ್ನಿ : ಅಪ್ಪುಮಣಿಯಂಡ ತಂಡಕ್ಕೆ ಗೆಲುವು ನಾಪೋಕ್ಲು (ಕೊಡಗು): ಗಣಪತಿ ಗಳಿಸಿದ ಹ್ಯಾಟ್ರಿಕ್‌ ಗೋಲುಗಳ ಬಲದಿಂದ ಅಪ್ಪುಮಣಿಯಂಡ ತಂಡವು ಕೊಡವ ಕೌಟುಂಬಿಕ ಹಾಕಿ ಟೂರ್ನಿಯಲ್ಲಿ ಅಮೋಘ ಜಯ ದಾಖಲಿಸಿತು. ಚೆರಿಯಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಸೋಮವಾರದ ಪಂದ್ಯದಲ್ಲಿ ಅಪ್ಪುಮಣಿಯಂಡ ತಂಡದವರು 3–0 ಗೋಲುಗಳಿಂದ ಆಪಾಡಂಡ ತಂಡದವರನ್ನು ಮಣಿಸಿದರು. ಚೆರುಮಂದಂಡ ತಂಡದವರು ಚಟ್ಟಂಗಡ ವಿರುದ್ಧ 3–0 ಗೋಲುಗಳ ಮೂಲಕ ಜಯ ಸಾಧಿಸಿದರು. ಚೆರುಮಂದಂಡ ತಂಡದ ಕವನ್ ಕಾರ್ಯಪ್ಪ ಅವರೂ ‘ಹ್ಯಾಟ್ರಿಕ್‌’ ಸಾಧನೆ ಮಾಡಿದರು. ಮನೆಯಪಂಡ ತಂಡದವರು 2-1ರಲ್ಲಿ ತೆಕ್ಕಡ ತಂಡದವರ ವಿರುದ್ಧ ರೋಚಕ ಜಯ ಸಾಧಿಸಿದರೆ, ಬಿದ್ದಾಟಂಡ ತಂಡವು 1-0ರಿಂದ ಚಂದಪಂಡ ಎದುರು, ಕುಪ್ಪಂಡ ತಂಡವು 4-2ರಲ್ಲಿ ಮೂಡೇರ ತಂಡದ ಎದುರು ಹಾಗೂ ಮೇಕೇರಿರ ತಂಡದವರು 5-4ರಿಂದ ಪುಚ್ಚಿಮಾಡ ತಂಡದ ಎದುರು ಗೆಲುವು ಸಾಧಿಸಿದರು. ಅಪ್ಪನೆರವಂಡ 3-1ರಲ್ಲಿ ಕಂಜಿತಂಡ ವಿರುದ್ಧ, ಕಲಿಯಂಡ 2-1ರಲ್ಲಿ ಮಲ್ಲಜ್ಜಿರ ವಿರುದ್ಧ, ಅರೆಯಡ ತಂಡವು 2-0ರಲ್ಲಿ ಚೀಯಂಡಿರ ವಿರುದ್ಧ, ಪಟ್ಟಡ ತಂಡದವರು 2-1ರಲ್ಲಿ ಮುಂಡ್ಯೋಳಂಡ ಎದುರು, ಐಚೆಟ್ಟಿರ ತಂಡವು 5-0 ಅಂತರದಿಂದ ಬಲ್ಲಂಡ ತಂಡದ ವಿರುದ್ಧ ಜಯ ಸಾಧಿಸಿದರು. ಶಿವಚಾಳಿಯಂಡ ತಂಡವು ಪೇರಿಯಂಡ ತಂಡದವರನ್ನು 2-0 ಅಂತರದಿಂದ ಸೋಲಿಸಿದರೆ, ಚಿರಿಯಪಂಡ ತಂಡವು 3- 2ರಲ್ಲಿ ಪಾಂಡಂಡ ಎದುರು, ತಂಬುಕುತ್ತಿರ ತಂಡದವರು 3-0 ಅಂತರದಿಂದ ಚೆರಂಡ ತಂಡದವರನ್ನು ಮಣಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.