ಬ್ಯಾಡ್ಮಿಂಟನ್‌: ನಾಲ್ಕರಘಟ್ಟಕ್ಕೆ ಸಿಂಧು ಮ್ಯಾಡ್ರಿಡ್‌, ಸ್ಪೇನ್: ಚುರುಕಿನ ಆಟವಾಡಿದ ಭಾರತದ ಪಿ.ವಿ.ಸಿಂಧು ಅವರು ಮ್ಯಾಡ್ರಿಡ್‌ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿದರು. ಆದರೆ ಕಿದಂಬಿ ಶ್ರೀಕಾಂತ್‌ ನಿರಾಶೆ ಅನುಭವಿಸಿದರು. ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಹೈದರಾಬಾದ್‌ನ ಆಟಗಾರ್ತಿ 21–14, 21–17 ರಲ್ಲಿ ಡೆನ್ಮಾರ್ಕ್‌ನ ಮಿಯಾ ಬ್ಲಿಕ್‌ಫೆಲ್ಟ್‌ ಅವರನ್ನು ಮಣಿಸಿದರು. ಇಲ್ಲಿ ಎರಡನೇ ಶ್ರೇಯಾಂಕ ಪಡೆದಿರುವ ಅವರು 40 ನಿಮಿಷಗಳಲ್ಲಿ ಪಂದ್ಯ ತಮ್ಮದಾಗಿಸಿಕೊಂಡರು. 27 ವರ್ಷದ ಸಿಂಧು ಈ ವರ್ಷದಲ್ಲಿ ತಾವಾಡಿದ ಟೂರ್ನಿಗಳಲ್ಲಿ ನಾಲ್ಕರಘಟ್ಟ ಪ್ರವೇಶಿಸಿದ್ದು ಇದೇ ಮೊದಲು. ಶನಿವಾರ ನಡೆಯಲಿರುವ ಸೆಮಿಫೈನಲ್‌ನಲ್ಲಿ ಅವರು ಸಿಂಗಪುರದ ಯಿಯೊ ಜಿಯಾ ಮಿನ್‌ ವಿರುದ್ಧ ಪೈಪೋಟಿ ನಡೆಸುವರು. ಶ್ರೀಕಾಂತ್‌ ಪರಾಭವ: ಪುರುಷರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ಶ್ರೀಕಾಂತ್‌ 18-21, 15-21 ರಲ್ಲಿ ಅಗ್ರಶ್ರೇಯಾಂಕದ ಆಟಗಾರ ಜಪಾನ್‌ನ ಕೆಂಟಾ ನಿಶಿಮೊಟೊ ಎದುರು ಪರಾಭವಗೊಂಡರು. ಮೊದಲ ಗೇಮ್‌ನಲ್ಲಿ ಎದುರಾಳಿಗೆ ಪ್ರಬಲ ಪೈಪೋಟಿ ನೀಡಿದ ಶ್ರೀಕಾಂತ್‌, ಎರಡನೇ ಗೇಮ್‌ನಲ್ಲಿ ಸಾಕಷ್ಟು ಸ್ವಯಂಕೃತ ತಪ್ಪುಗಳನ್ನು ಮಾಡಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.