ಮ್ಯಾಡ್ರಿಡ್‌ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌: ಫೈನಲ್‌ಗೆ ಸಿಂಧು ಮ್ಯಾಡ್ರಿಡ್‌ (ಪಿಟಿಐ): ಚುರುಕಿನ ಆಟವಾಡಿದ ಪಿ.ವಿ.ಸಿಂಧು ಅವರು ಮ್ಯಾಡ್ರಿಡ್‌ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯ ಫೈನಲ್‌ ಪ್ರವೇಶಿಸಿದರು. ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ಅವರು 24–22, 22–20 ರಲ್ಲಿ ಸಿಂಗಪುರದ ಯಿಯೊ ಜಿಯಾ ಮಿನ್‌ ವಿರುದ್ಧ ಗೆದ್ದರು. ಹೈದರಾಬಾದ್‌ನ ಆಟಗಾರ್ತಿ ಈ ವರ್ಷ ಆಡಿದ ಟೂರ್ನಿಗಳಲ್ಲಿ ಫೈನಲ್‌ ಪ್ರವೇಶಿಸಿದ್ದು ಇದೇ ಮೊದಲು. ಜಿದ್ದಾಜಿದ್ದಿನ ಸೆಣಸಾಟ 48 ನಿಮಿಷ ನಡೆಯಿತು. ಮೊದಲ ಗೇಮ್‌ನಲ್ಲಿ 15–20 ರಿಂದ ಹಿನ್ನಡೆಯಲ್ಲಿದ್ದ ಸಿಂಧು ಆ ಬಳಿಕ ಅಮೋಘ ರೀತಿಯಲ್ಲಿ ಮರುಹೋರಾಟ ನಡೆಸಿ ಗೇಮ್‌ ಗೆದ್ದರು. ಎರಡನೇ ಗೇಮ್‌ನಲ್ಲಿ ಇಬ್ಬರೂ 17–17 ರಲ್ಲಿ ಸಮಬಲ ಸಾಧಿಸಿದ್ದರು. ಆ ಬಳಿಕ ಸಿಂಧು ಎಚ್ಚರಿಕೆಯಾಗಿ ಆಟವಾಡಿ ಫೈನಲ್‌ಗೆ ಲಗ್ಗೆಯಿಟ್ಟರು. ಸ್ಪೇನ್‌ನ ಕರೊಲಿನಾ ಮರಿನ್‌– ಇಂಡೊನೇಷ್ಯಾದ ಗ್ರೆಗೊರಿಯಾ ತನ್‌ಜುಂಗ್‌ ನಡುವಣ ಸೆಮಿ ಪಂದ್ಯದ ವಿಜೇತರನ್ನು ಸಿಂಧು ಅವರು ಫೈನಲ್‌ನಲ್ಲಿ ಎದುರಿಸಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.