ಕುಸ್ತಿಪಟುಗಳ ಪ್ರತಿಭಟನೆ |ಘಟನಾವಳಿಯ ಪ್ರಮುಖ 9 ಅಂಶಗಳಿವು ಭಾರತ ಕುಸ್ತಿ ಫೆಡರೇಷನ್ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸುವಂತೆ ಕೋರಿ ಕುಸ್ತಿಪಟುಗಳು ಈ ವಾರ ಮತ್ತೆ ಪ್ರತಿಭಟನೆ ಆರಂಭಿಸಿದ್ದಾರೆ. ಸುಪ್ರೀಂ ಕೋರ್ಟ್‌ ಸೂಚನೆಯ ಮೇರೆಗೆ ದೆಹಲಿ ಪೊಲೀಸರು ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಭಾರತ ಕುಸ್ತಿ ಫೆಡರೇಷನ್ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸುವಂತೆ ಕೋರಿ ಕುಸ್ತಿಪಟುಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಕುಸ್ತಿಪಟುಗಳ ಮನವಿಯ ಮೇರೆಗೆ ಸುಪ್ರೀಂ ಕೋರ್ಟ್ ದೆಹಲಿ ಪೊಲೀಸರಿಗೆ ನೋಟಿಸ್ ನೀಡಿದೆ. ಶುಕ್ರವಾರ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದೆ. ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾರತ ಪ್ರತಿನಿಧಿಸಿದ ಕುಸ್ತಿಪಟುಗಳು ತಮ್ಮ ಮೇಲೆ ಲೈಂಗಿಕ ಕಿರುಕುಳದ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ಈ ವಿಷಯವನ್ನು ನ್ಯಾಯಾಲಯ ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹೇಳಿದ್ದಾರೆ. ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾರತ ಪ್ರತಿನಿಧಿಸಿದ ಕುಸ್ತಿಪಟುಗಳು ತಮ್ಮ ಮೇಲೆ ಲೈಂಗಿಕ ಕಿರುಕುಳದ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ಈ ವಿಷಯವನ್ನು ನ್ಯಾಯಾಲಯ ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹೇಳಿದ್ದಾರೆ. ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರಕರಣ ದಾಖಲಾಗುವವರೆಗೂ ಧರಣಿ ನಡೆಸುವುದಾಗಿ ಹೇಳಿದ್ದಾರೆ. ಇವರಲ್ಲಿ ಒಲಿಂಪಿಯನ್ ಕುಸ್ತಿಪಟುಗಳಾದ ವಿನೇಶಾ ಫೋಗಟ್, ಬಜರಂಗ್ ಪೂನಿಯಾ ಹಾಗೂ ಸಾಕ್ಷಿ ಮಲಿಕ್ ಇದ್ದಾರೆ. ತಮ್ಮ ಮೇಲೆ ಮಾಡಿರುವ ಲೈಂಗಿಕ ದೌರ್ಜನ್ಯದ ಆರೋಪಗಳು ಸುಳ್ಳು. ಅದನ್ನು ಸಾಬೀತುಪಡಿಸಲು ತೀವ್ರ ಹೋರಾಟ ನಡೆಸುವೆ. ಸುಲಭವಾಗಿ ಸೋಲುವುದಿಲ್ಲ ಎಂದು ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್‌ ಭೂಷಣ್ ಶರಣ್ ಸಿಂಗ್ ಹೇಳಿದ್ದಾರೆ.‘ಸ್ನೇಹಿತರೇ ನನ್ನ ಜೀವನದಲ್ಲಿ ಏನು ಕಳೆದುಕೊಂಡಿದ್ದೇನೆ ಹಾಗೂ ಗಳಿಸಿದ್ದೇನೆ ಎನ್ನುವುದು ಪ್ರತಿಫಲನವಾಗಲಿದೆ. ನಾನು ಅಸಹಾಯಕನಾದಾಗ ಹಾಗೂ ಹೋರಾಡಲು ಅಶಕ್ತನಾದಾಗ ಜೀವಿಸಲು ಇಚ್ಛಿಸುವುದಿಲ್ಲ. ಅಂತಹ ಜೀವನಕ್ಕಿಂತ ಸಾವು ಮೇಲು’ ಎಂದು ವಿಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಧರಣಿ ಮಾಡುತ್ತಿರುವ ಕುಸ್ತಿಪಟುಗಳು ಈ ವಿಷಯದ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಸಮಯ ಕೋರಿದ್ದಾರೆ. ಇತ್ತೀಚೆಗೆ ಸಾಕ್ಷಿ ಮಲಿಕ್‌ ಅವರು ಮಾಧ್ಯಮ ಸಂವಾದದಲ್ಲಿ ಮಾತನಾಡುತ್ತ, ಪ್ರಧಾನಿ ಮೋದಿ ಅವರು ‘ಬೇಟಿ ಬಚಾವೋ' ಬಗ್ಗೆ ಮಾತನಾಡುತ್ತಾರೆ ಮತ್ತು ಎಲ್ಲರ 'ಮನ್ ಕಿ ಬಾತ್' ಕೇಳುತ್ತಾರೆ. ಮೋದಿ ನಮ್ಮ 'ಮನ್ ಕಿ ಬಾತ್' ಕೇಳಲು ಸಾಧ್ಯವಿಲ್ಲವೇ? ಎಂದು ಹೇಳಿದ್ದಾರೆ. ಕುಸ್ತಿಪಟುಗಳು ಬೀದಿಗಿಳಿದು ಧರಣಿ ನಡೆಸುತ್ತಿರುವುದು ಅಶಿಸ್ತು ಎಂದೇ ಪರಿಗಣಿತವಾಗುತ್ತದೆ. ಇದರಿಂದಾಗಿ ದೇಶದ ವರ್ಚಸ್ಸು ಹಾಳಾಗುತ್ತಿದೆ ಎಂದು ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಅಧ್ಯಕ್ಷೆ ಪಿ.ಟಿ. ಉಷಾ ಹೇಳಿದ್ದಾರೆ. ಕುಸ್ತಿಪಟುಗಳು ಸಮಿತಿಯ ವರದಿಗಾಗಿ ಕಾಯಬೇಕಾಗಿತ್ತು ಎಂದು ಹೇಳಿದ್ದಾರೆ. ಪಿ.ಟಿ. ಉಷಾ ಅವರ ಹೇಳಿಕೆಯಿಂದ ತಮಗೆ ನೋವಾಗಿದೆ. ಈಗ ಅವರ ಬೆಂಬಲಕ್ಕಾಗಿ ನಾವು ಎದುರು ನೋಡುತ್ತಿದ್ದೇವೆ ಎಂದು ಕುಸ್ತಿಪಟುಗಳು ಹೇಳಿದ್ದಾರೆ. ಉಷಾ ಅವರು ಕೆಲವು ರೀತಿಯ ಒತ್ತಡಕ್ಕೆ ಒಳಗಾಗಿರಬಹುದು ಎಂದು ಕೆಲ ಕುಸ್ತಿಪಟುಗಳು ಸುಳಿವು ನೀಡಿದ್ದಾರೆ. ಪ್ರಕರಣದ ಕುರಿತು ಪಾರದರ್ಶಕವಾಗಿ ವಿಚಾರಣೆ ನಡೆಯಲು ಕ್ರಮ ಕೈಗೊಳ್ಳಲಾಗಿದೆ. ವಿಚಾರಣಾ ಸಮಿತಿಯ ಮುಂದೆ ತಮ್ಮ ಅಹವಾಲುಗಳನ್ನು ಮುಕ್ತವಾಗಿ ಸಲ್ಲಿಸಲು ಕುಸ್ತಿಪಟುಗಳಿಗೆ ಈ ಹಿಂದೆಯೇ ಅವಕಾಶ ನೀಡಲಾಗಿದೆ. ಅವರೊಂದಿಗೂ ಮಾತನಾಡಲಾಗಿದೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ಕುಸ್ತಿಪಟುಗಳು ಜನವರಿಯಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಮತ್ತು ಇತರ ತರಬೇತುದಾರರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಮಾಡಿ ಪ್ರತಿಭಟನೆ ನಡೆಸಿದ್ದರು. ಕ್ರೀಡಾ ಸಚಿವ ಅನುರಾಗ್ ಠಾಕೂರ್ ಭರವಸೆಯ ನಂತರ ತಮ್ಮ ಪ್ರತಿಭಟನೆ ಹಿಂತೆಗೆದುಕೊಂಡಿದ್ದರು. ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿ ಈ ವಾರ ಮತ್ತೆ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.