ಬ್ರಿಜ್‌ಭೂಷಣ್‌ ಬಂಧನಕ್ಕೆ ಕುಸ್ತಿಪಟುಗಳ ಆಗ್ರಹ ನವದೆಹಲಿ (ಪಿಟಿಐ/ಎಎಫ್‌ಪಿ): ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್‌ ದಾಖಲಿಸಲು ನಿರ್ಧರಿಸಿದ್ದಾರೆ. ಆದರೂ ಕಳೆದ ಆರು ದಿನಗಳಿಂದ ಜಂತರ್‌ ಮಂಥರ್‌ನಲ್ಲಿ ನಡೆಸುತ್ತಿರುವ ಧರಣಿಯನ್ನು ಮುಂದುವರಿಸಲು ಕುಸ್ತಿಪಟುಗಳು ತೀರ್ಮಾನಿಸಿದ್ದಾರೆ. ‘ಬ್ರಿ‌ಜ್‌ಭೂಷಣ್‌ ವಿರುದ್ಧ ಶುಕ್ರವಾರ ಎಫ್‌ಐಆರ್‌ ದಾಖಲಿಸಲಾಗುವುದು’ ಎಂದು ದೆಹಲಿ ಪೊಲೀಸರನ್ನು ಪ್ರತಿನಿಧಿಸುತ್ತಿರುವ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಮತ್ತು ನ್ಯಾಯಮೂರ್ತಿ ಪಿ.ಎಸ್‌.ನರಸಿಂಹ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ ಪೀಠಕ್ಕೆ ತಿಳಿಸಿದ್ದಾರೆ. ‘ಎಫ್‌ಐಆರ್‌ ದಾಖಲಿಸಲು ನಿರ್ಧರಿಸಿರುವುದು ಗೆಲುವಿನ ಹಾದಿಯಲ್ಲಿ ನಾವು ಇಟ್ಟಿರುವ ಮೊದಲ ಹೆಜ್ಜೆ. ಆದರೆ ಬ್ರಿಜ್‌ಭೂಷಣ್‌ ಅವರ ಬಂಧನದವರೆಗೂ ಧರಣಿ ಮುಂದುವರಿಯಲಿದೆ’ ಎಂದು ಸಾಕ್ಷಿ ಮಲಿಕ್‌ ಪ್ರತಿಕ್ರಿಯಿಸಿದ್ದಾರೆ. ‘ದೆಹಲಿ ಪೊಲೀಸರು ದಾಖಲಿಸಲಿರುವ ಎಫ್‌ಐಆರ್‌ ಮೇಲೆ ನಮಗೆ ನಂಬಿಕೆಯಿಲ್ಲ. ಎಫ್‌ಐಆರ್‌ನಲ್ಲಿ ಏನೇನಿದೆ ಎಂಬುದನ್ನು ತಿಳಿದುಕೊಂಡ ಬಳಿಕ ಮುಂದಿನ ನಿರ್ಧಾರ (ಧರಣಿ ಕೈಬಿಡುವ ಬಗ್ಗೆ) ತೆಗೆದುಕೊಳ್ಳುತ್ತೇವೆ. ಬ್ರಿಜ್‌ಭೂಷಣ್‌ ಅವರು ಹೊಂದಿರುವ ಎಲ್ಲ ಹುದ್ದೆಗಳನ್ನೂ ಕಿತ್ತುಹಾಕಿ ಜೈಲಿಗೆ ಕಳುಹಿಸಬೇಕು. ಇಲ್ಲದಿದ್ದರೆ ಅವರು ತನಿಖೆಯ ಮೇಲೆ ಪ್ರಭಾವ ಬೀರಲಿದ್ದಾರೆ’ ಎಂದು ವಿನೇಶಾ ಫೋಗಟ್‌ ಹೇಳಿದ್ದಾರೆ. ‘ಹಲವು ಕ್ರೀಡಾಪಟುಗಳು ಮತ್ತು ಬಾಲಿವುಡ್‌ ನಟ, ನಟಿಯರು ನಮ್ಮ ಬೆಂಬಲಕ್ಕೆ ನಿಂತಿದ್ದಾರೆ. ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದಿದ್ದಾರೆ. ‘ಕುಸ್ತಿಪಟುಗಳ ಜೀವದ ಮೇಲೆ ಬೆದರಿಕೆಯಿದ್ದರೂ, ಎಲ್ಲರೂ ಒಗ್ಗಟ್ಟಿನಿಂದ ಇದುವರೆಗೆ ಪ್ರತಿಭಟನೆ ನಡೆಸಿದ್ದೇವೆ. ಆದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಬೇಸರದ ಸಂಗತಿ’ ಎಂದು ಬಜರಂಗ್‌ ಪೂನಿಯಾ ಅಸಮಾಧಾನ ಹೊರಹಾಕಿದ್ದಾರೆ. ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿರುವ ಕುಸ್ತಿಪಟುಗಳು ಧರಣಿ ನಡೆಸುತ್ತಿದ್ದಾರೆ. ಒಲಿಂಪಿಯನ್ ಕುಸ್ತಿಪಟುಗಳಾದ ವಿನೇಶಾ, ಬಜರಂಗ್ ಪೂನಿಯಾ ಹಾಗೂ ಸಾಕ್ಷಿ ಅವರು ನೇತೃತ್ವ ವಹಿಸಿದ್ದಾರೆ. - - ನೀರಜ್‌ ಚೋಪ್ರಾ ಬೆಂಬಲ ಚಾಂಪಿಯನ್‌ ಜಾವೆಲಿನ್‌ ಥ್ರೋ ಸ್ಪರ್ಧಿ ನೀರಜ್‌ ಚೋಪ್ರಾ ಒಳಗೊಂಡಂತೆ ದೇಶದ ಪ್ರಮುಖ ಕ್ರೀಡಾಳುಗಳು ಕುಸ್ತಿಪಟುಗಳ ಬೆಂಬಲಕ್ಕೆ ನಿಂತಿದ್ದಾರೆ. ‘ಅಥ್ಲೀಟ್‌ಗಳು ನ್ಯಾಯಕ್ಕಾಗಿ ಬೀದಿಗಿಳಿದಿರುವುದನ್ನು ನೋಡುವಾಗ ಮನಸ್ಸಿಗೆ ನೋವಾಗುತ್ತದೆ. ಕುಸ್ತಿಪಟುಗಳು ಮನವಿಗೆ ತಕ್ಷಣ ಸ್ಪಂದಿಸಿ ನ್ಯಾಯ ಒದಗಿಸಬೇಕು’ ಎಂದು ನೀರಜ್‌ ಟ್ವೀಟ್‌ ಮಾಡಿದ್ಧಾರೆ. ‘ಫೆಡರೇಷನ್‌ನ ಅಧ್ಯಕ್ಷರೊಬ್ಬರು ಅಂತಹ ಕೃತ್ಯದಲ್ಲಿ ತೊಡಗಿದ್ದರೆ ಕ್ರೀಡಾಪಟುಗಳು ಎಲ್ಲಿಗೆ ಹೋಗುತ್ತಾರೆ? ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ. ಬಾಕ್ಸರ್‌ ನಿಖತ್‌ ಜರೀನ್ ಟೆನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ ಹಾಕಿ ಆಟಗಾರ್ತಿ ರಾಣಿ ರಾಂಪಾಲ್ ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರರಾದ ವೀರೇಂದ್ರ ಸೆಹ್ವಾಗ್‌ ಹರಭಜನ್‌ ಸಿಂಗ್‌ ಇರ್ಫಾನ್‌ ಪಠಾಣ್‌ ಮದನ್‌ ಲಾಲ್‌ ಮತ್ತು ನವಜೋತ್‌ ಸಿಂಗ್‌ ಸಿಧು ಅವರೂ ಬೆಂಬಲ ವ್ಯಕ್ತಪಡಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.