ಏಷ್ಯಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ಸಿಂಧು, ಪ್ರಣಯ್‌ ಸವಾಲು ಅಂತ್ಯ ದುಬೈ: ಭಾರತದ ಪಿ.ವಿ.ಸಿಂಧು ಮತ್ತು ಎಚ್‌.ಎಸ್‌.ಪ್ರಣಯ್‌ ಅವರು ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲುವುದರೊಂದಿಗೆ ಏಷ್ಯಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ಸವಾಲಿಗೆ ತೆರೆಬಿತ್ತು. ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಸಿಂಧು 21–18, 5–21, 9–21 ರಲ್ಲಿ ಕೊರಿಯದ ಆನ್‌ ಸೆ ಯಾಂಗ್‌ ಎದುರು ಪರಾಭವಗೊಂಡರು. ಇಲ್ಲಿ ಎಂಟನೇ ಶ್ರೇಯಾಂಕ ಹೊಂದಿದ್ದ ಹೈದರಾಬಾದ್‌ನ ಆಟಗಾರ್ತಿ ಮೊದಲ ಗೇಮ್‌ ಗೆದ್ದರೂ, ಬಳಿಕದ ಎರಡೂ ಗೇಮ್‌ಗಳಲ್ಲಿ ಲಯ ಕಳೆದುಕೊಂಡರು. 2ನೇ ಗೇಮ್‌ನಲ್ಲಿ ಅವರು ಕೇವಲ ಐದು ಪಾಯಿಂಟ್ಸ್‌ ಮಾತ್ರ ಗಳಿಸಿದರು. ಪುರುಷರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಪ್ರಣಯ್‌ ಅವರು ಜಪಾನ್‌ನ ಕಾಂತಾ ಸುನೆಯೆಮ ಎದುರಿನ ಪಂದ್ಯದಲ್ಲಿ ಗಾಯದ ಕಾರಣ ಅರ್ಧದಲ್ಲೇ ಹಿಂದೆ ಸರಿದರು. ಈ ವೇಳೆ ಭಾರತದ ಆಟಗಾರ 11–21, 9–11 ರಲ್ಲಿ ಹಿನ್ನಡೆಯಲ್ಲಿದ್ದರು. ಸೆಮಿಗೆ ಸಾತ್ವಿಕ್‌– ಚಿರಾಗ್‌: ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಜೋಡಿ ಪುರುಷರ ಡಬಲ್ಸ್‌ ವಿಭಾಗದ ಸೆಮಿಫೈನಲ್‌ ಪ್ರವೇಶಿಸಿತು. ಎಂಟರಘಟ್ಟದ ಪಂದ್ಯದಲ್ಲಿ ಅವರು 21–11, 21–12 ರಲ್ಲಿ ಇಂಡೊನೇಷ್ಯಾದ ಮೊಹಮ್ಮದ್‌ ಅಹ್ಸನ್‌– ಹೆಂಡ್ರಾ ಸೆತಿಯವನ್‌ ವಿರುದ್ಧ ಗೆದ್ದರು. ಮೂರನೇ ಶ್ರೇಯಾಂಕದ ಜೋಡಿಯ ವಿರುದ್ಧ ಚೇತೋಹಾರಿ ಪ್ರದರ್ಶನ ನೀಡಿದ ಅವರು 28 ನಿಮಿಷಗಳಲ್ಲಿ ಪಂದ್ಯ ಜಯಿಸಿದರು. ಮಿಶ್ರ ಡಬಲ್ಸ್‌ ವಿಭಾಗದಲ್ಲಿ ರೋಹನ್‌ ಕಪೂರ್‌– ಎನ್‌.ಸಿಕ್ಕಿ ರೆಡ್ಡಿ ಜೋಡಿ 18-21, 21-19, 15-21 ರಲ್ಲಿ ಇಂಡೊನೇಷ್ಯಾದ ಡೆಜಾನ್ ಫೆರ್ದಿನನ್‌ಸಿಯಾ– ಗ್ಲೋರಿಯಾ ಎಮಾನುಯೆಲ್ ವಿಜಾಜ ಕೈಯಲ್ಲಿ ಪರಾಭವಗೊಂಡಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.