ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಪ್ರತಿಭಟನೆಗೆ ₹ 5ಲಕ್ಕಕ್ಕೂ ಹೆಚ್ಚು ಖರ್ಚು ನವದೆಹಲಿ: ಭಾರತ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಖ್ಯಾತನಾಮ ಕುಸ್ತಿಪಟುಗಳು ಇಲ್ಲಿ ನಡೆಸಿರುವ ಪ್ರತಿಭಟನೆಗೆ ಈಗಾಗಲೇ ₹ 5 ಲಕ್ಷಕ್ಕೂ ಹೆಚ್ಚು ವೆಚ್ಚವಾಗಿದೆ. ಒಲಿಂಪಿಯನ್ ಕುಸ್ತಿಪಟುಗಳ ನೇತೃತ್ವದಲ್ಲಿ ಕಳೆದ ಐದು ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ. ಮೂಲಸೌಲಭ್ಯಗಳ ವ್ಯವಸ್ಥೆ ಮಾಡಿಕೊಳ್ಳಲು ಪ್ರತಿಭಟನಾ ನಿರತರು ದೊಡ್ಡ ಮೊತ್ತ ಖರ್ಚು ಮಾಡಿದ್ದಾರೆ. ಐದು ಲಕ್ಷ ರೂಪಾಯಿಯಲ್ಲಿ ಹಾಸಿಗೆಗಳು, ಬೆಡ್‌ಶೀಟ್‌ಗಳು, ಫ್ಯಾನ್‌ಗಳು, ಸ್ಪೀಕರ್ ಮತ್ತು ಮೈಕ್ರೊಫೋನ್, ಮಿನಿ ಪವರ್ ಜನರೇಟರ್‌ ಗಳನ್ನು ಈ ಸ್ಥಳದಲ್ಲಿ ಅಳವಡಿಸಲಾಗಿದೆ. ಆರಂಭದಲ್ಲಿ ಅವರು ಹಾಸಿಗೆ, ಬೆಡ್‌ ಶೀಟ್‌ಗಳು ಮತ್ತು ಧ್ವನಿವರ್ಧಕಗಳನ್ನು ಬಾಡಿಗೆಗೆ (ದಿನವೊಂದಕ್ಕೆ ₹27 ಸಾವಿರ) ತರಲಾಗಿದೆ. ಆದರೆ ಇದು ದುಬಾರಿಯಾಯಿತು ಎಂದು ಮನಗಂಡ ಪ್ರತಿಭಟನಾನಿರತರು ಅವುಗಳನ್ನು ಖರೀದಿಸಲು ನಿರ್ಧರಿಸಿದರು. ‘ಹಾಸಿಗೆಗಳನ್ನು ಖರೀದಿಸಲು ನಿರ್ಧರಿಸಿದೆವು. ನಮ್ಮ ಖರಕೋಡಾ ಗ್ರಾಮದಿಂದ 80 ಹಾಸಿಗೆಗಳನ್ನು ₹ 50 ಸಾವಿರ ಕೊಟ್ಟು ತರಿಸಿದೆ. ಈ ಎಲ್ಲ ಹಾಸಿಗೆಗಳಿಗೆ ದಿನವೊಂದಕ್ಕೆ ₹12 ಸಾವಿರ ಬಾಡಿಗೆ ನೀಡಿದ್ದರೂ ವಿಪರೀತ ದುಬಾರಿಯಾಗುತ್ತಿತ್ತು’ ಎಂದು ವಿನೇಶಾ ಫೋಗಟ್ ಅವರ ಪತಿ ಸೋಮವೀರ್ ರಾಠಿ ಹೇಳಿದ್ದಾರೆ. ‘ಆರಂಭದಲ್ಲಿ ದಿನವೊಂದಿಗೆ ₹12 ಸಾವಿರ ಬಾಡಿಗೆ ಕೊಟ್ಟು ತಂದಿದ್ದೆವು. ಅದೂ ತುಟ್ಟಿಯಾಯಿತು. ಅದರಿಂದಾಗಿ ಚಾಂದನಿ ಚೌಕ್ ಮಾರುಕಟ್ಟೆಯಲ್ಲಿ ₹ 60 ಸಾವಿರ ಕೊಟ್ಟು ಧ್ವನಿವರ್ಧಕ ಸಲಕರಣೆಗಳನ್ನು ಖರೀದಿಸಿದ್ದೇವೆ. ಕ್ರೀಡಾಪಟುಗಳ ಪ್ರತಿಭಟನೆಗಾಗಿ ಈ ಸಲಕರಣೆಗಳ ಖರೀದಿ ಮಾಡಲಾಗುತ್ತಿದೆ ಎಂದು ಅರಿತ ಆ ಅಂಗಡಿಯ ಮಾಲೀಕರು ತಮ್ಮ ಲಾಭಾಂಶವನ್ನು ಬಿಟ್ಟುಕೊಟ್ಟರು ’ ಎಂದೂ ಹೇಳಿದರು. ಫ್ಯಾನ್ ಹಾಗೂ ಜನರೇಟರ್‌ಗಳನ್ನು ಬಾಡಿಗೆಗೆ (ದಿನವೊಂದಕ್ಕೆ ₹ 10ಸಾವಿರ) ತರಲಾಗಿದೆ. ಒಂದೊಮ್ಮೆ ಅಗತ್ಯ ಬಿದ್ದರೆ ಕೂಲರ್‌ಗಳನ್ನೂ ಖರೀದಿಸಲಾಗುವುದು. ಇಲ್ಲಿಯವರೆಗೆ ಒಟ್ಟು 5–6 ಲಕ್ಷ ರೂಪಾಯಿ ಖರ್ಚು ಮಾಡಿದ್ದೇವೆ ಎಂದು ಅವರು ಹೇಳಿದರು. ಊಟ, ತಿಂಡಿ ಹಾಗೂ ನೀರು ಬಾಟಲಿಗಳನ್ನೂ ಖರೀದಿಸಿರುವುದು ಬೇರೆಯ ಲೆಕ್ಕವಿದೆ ಎನ್ನುತ್ತಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.