ಮುಕ್ತ ಸರ್ಫಿಂಗ್‌, ಸ್ಟ್ಯಾಂಡ್ ಅಪ್ ಪೆಡಲಿಂಗ್ ಸ್ಪರ್ಧೆ| ಕಮಲಿ, ಸಿಂಚನಾ ಫೈನಲ್‌ಗೆ ಮಂಗಳೂರು: ನಗರದ ಸಿಂಚನಾ ಡಿ.ಗೌಡ, ತಮಿಳುನಾಡಿನ ಕಮಲಿ ಪಿ, ಗಾಯತ್ರಿ ಜುವೇಕರ್‌ ಹಾಗೂ ಗೋವಾದ ಸುಗರ್ ಶಾಂತಿ ಬನಾರ್ಸೆ ಅವರು ಮಂಗಳೂರು ಸರ್ಫ್‌ ಕ್ಲಬ್‌ ಆಯೋಜಿಸಿರುವ ರಾಷ್ಟ್ರಮಟ್ಟದ ಮುಕ್ತ ಸರ್ಫಿಂಗ್ ಸ್ಪರ್ಧೆಯ 16 ವರ್ಷಕ್ಕಿಂತ ಮೇಲಿನವರ ವಿಭಾಗದ ಫೈನಲ್ ಪ್ರವೇಶಿಸಿದರು. ನಗರದ ತಣ್ಣೀರುಬಾವಿ ಕಡಲಿನಲ್ಲಿ ಶನಿವಾರ ಆರಂಭಗೊಂಡ ಸ್ಪರ್ಧೆಯ ಸೆಮಿಫೈನಲ್‌ನ ಎರಡನೇ ಹೀಟ್ಸ್‌ನಲ್ಲಿ 16 ವರ್ಷದೊಳಗಿನ ಅಥ್ಲೀಟ್‌ ಸರ್ಫ್ ಟರ್ಫ್ ಕ್ಲಬ್‌ನ ಕಮಲಿ ಪ್ರೇಕ್ಷಕರನ್ನು ಮುದಗೊಳಿಸಿದರು. ಒಟ್ಟು 12 ಅಲೆಗಳ ಪೈಕಿ ಎರಡರಲ್ಲಿ ಅತ್ಯುತ್ತಮ ಸಾಮರ್ಥ್ಯ ತೋರಿದ ಅವರು ಹಿರಿಯ ಸ್ಪರ್ಧಿಗಳನ್ನು ಹಿಂದಿಕ್ಕಿ 7.5 ಪಾಯಿಂಟ್ ಗಳಿಸಿದರು. ಮಂಗಳೂರು ಸರ್ಫ್‌ ಕ್ಲಬ್‌ನ ಸಿಂಚನಾ 3.97 ಪಾಯಿಂಟ್‌ಗಳೊಂದಿಗೆ ಮಿಂಚಿದರು. ಒಂದನೇ ಹೀಟ್ಸ್‌ನಲ್ಲಿ ಸುಗರ್ ಶಾಂತಿ 9.84 ಪಾಯಿಂಟ್ ಕಲೆ ಹಾಕಿದರೆ ಗಾಯತ್ರಿ 4.63 ಪಾಯಿಂಟ್‌ ಗಳಿಸಿ ಸಮಾಧಾನಪಟ್ಟುಕೊಂಡರು. ಸೆಮಿಫೈನಲ್‌ಗೆ ಪ್ರದೀಪ್ ಪೂಜಾರ್‌, ರಾಜು ಸುರೇಶ್ ಪೂಜಾರ: 16 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಪ್ರದೀಪ್ ಪೂಜಾರ್‌, ರಾಜು ಸುರೇಶ್ ಪೂಜಾರ, ತಯಿನ್ ಅರುಣ್‌, ಜೀವನ್ ಎಸ್‌, ಲೋಕೇಶ್ ಮತ್ತು ಹರೀಶ್ ಸೆಮಿಫೈನಲ್ ತಲುಪಿದರು. ಕ್ವಾರ್ಟರ್ ಫೈನಲ್‌ನ ಮೊದಲ ಹೀಟ್ಸ್‌ನಲ್ಲಿ ತಯಿನ್‌ (11 ಪಾಯಿಂಟ್ಸ್‌) ಮತ್ತು ಜೀವನ್‌ (8.25), ಎರಡನೇ ಹೀಟ್ಸ್‌ನಲ್ಲಿ ಲೋಕೇಶ್ (8.83) ಮತ್ತು ಮಂಗಳೂರಿನ ಮಂತ್ರ ಸರ್ಫ್ ಕ್ಲಬ್‌ನ ಪ್ರದೀಪ್ ಪೂಜಾರ್‌ (6.26), ಮೂರನೇ ಹೀಟ್ಸ್‌ನಲ್ಲಿ ಹರೀಶ್ (9.83), ಮಂತ್ರ ಸರ್ಫ್ ಕ್ಲಬ್‌ನ ರಾಜು ಸುರೇಶ್ ಪೂಜಾರ (9) ಕ್ರಮವಾಗಿ ಮೊದಲ ಎರಡು ಸ್ಥಾನಗಳನ್ನು ಗೆದ್ದುಕೊಂಡರು. 16 ವರ್ಷಕ್ಕಿಂತ ಮೇಲಿನ ಪುರುಷರ ವಿಭಾಗದಲ್ಲಿ ಅಜೀಶ್ ಅಲಿ (8.26), ರೂಬನ್‌ (7.9), ಸಂಜಯ್‌ ಸೆಲ್ವಮಣಿ (10.16), ರಾಹುಲ್ ಗೋವಿಂದ್‌ (8.6), ಹರೀಶ್‌ ಎಂ (11.34), ಮಣಿಕಂಠನ್ ಅಪ್ಪು (6.66), ಕಿಶೋರ್ ಕುಮಾರ್‌, ಸ್ವಪ್ನಿಲ್ ಭಿಂಗೆ (5.73), ಕಿರಣ್‌ಜೀತ್‌ (7.03), ಅಖಿಲನ್‌ ಎಸ್‌ (5.37), ರಾಜಗುರು (4.46), ಸಂಜಯ್ ಕುಮಾರ್ (8.6) ಹಾಗೂ ಮಂತ್ರ ಸರ್ಫ್ ಕ್ಲಬ್‌ನ ಸೆಲ್ವಂ (7.26) ಕ್ವಾರ್ಟರ್ ಫೈನಲ್‌ ಪ್ರವೇಶಿಸಿದರು. ಪ್ರಶಸ್ತಿ ವಿವರ: 16 ವರ್ಷಕ್ಕಿಂತ ಮೇಲಿನ ಪುರುಷರ ಮತ್ತು ಮಹಿಳೆಯರ ಸರ್ಫಿಂಗ್‌: ವಿಜೇತರಿಗೆ ₹ 1 ಲಕ್ಷ, ರನ್ನರ್ ಅಪ್‌ಗೆ ₹ 50 ಸಾವಿರ; 16 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಸರ್ಫಿಂಗ್‌: ವಿಜೇತರಿಗೆ ₹ 50 ಸಾವಿರ, ರನ್ನರ್ ಅಪ್‌ಗೆ ₹ 25 ಸಾವಿರ; ಪುರುಷರ ಮತ್ತು ಮಹಿಳೆಯರ ಸ್ಟ್ಯಾಂಡ್ ಅಪ್‌ ಪೆಡಲ್‌ ವಿಭಾಗ: ವಿಜೇತರಿಗೆ ₹ 50 ಸಾವಿರ, ರನ್ನರ್ ಅಪ್‌ ₹ 25 ಸಾವಿರ. ಇಂದಿನ ಸ್ಪರ್ಧೆಗಳು: ಸರ್ಫಿಂಗ್‌: ಕ್ವಾರ್ಟರ್‌ ಫೈನಲ್‌, ಸೆಮಿಫೈನಲ್ ಮತ್ತು ಫೈನಲ್‌: ಬೆಳಿಗ್ಗೆ 6.45ರಿಂದ. ಸ್ಟಾಂಡ್‌ ಅಪ್‌ ಪೆಡಲಿಂಗ್‌ ಫೈನಲ್‌: ಬೆಳಿಗ್ಗೆ 11ರಿಂದ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.