ಗೋಲ್ಡನ್ ಗ್ಲೋಬ್‌ ರೇಸ್‌: ಅಭಿಲಾಷ್‌ ಐತಿಹಾಸಿಕ ಸಾಧನೆ ತಿರುವನಂತಪುರಂ: ಕೇರಳದ ಅಭಿಲಾಷ್‌ ಟೋಮಿ ಅವರು ಪ್ರತಿಷ್ಠಿತ ಗೋಲ್ಡನ್‌ ಗ್ಲೋಬ್‌ ರೇಸ್‌ (ವಿಶ್ವ ಸೇಲಿಂಗ್‌ ಚಾಂಪಿಯನ್‌ಷಿಪ್‌) ಪೂರ್ಣಗೊಳಿಸಿದ ಭಾರತದ ಮೊದಲ ಸೇಲಿಂಗ್‌ ಸ್ಪರ್ಧಿ ಎಂಬ ಐತಿಹಾಸಿಕ ಸಾಧನೆ ಮಾಡಿದ್ದಾರೆ. ನೌಕಾಪಡೆಯ ನಿವೃತ್ತ ಅಧಿಕಾರಿಯಾಗಿರುವ 43 ವರ್ಷದ ಅಭಿಲಾಷ್‌ ಎರಡನೆಯವರಾಗಿ ಸ್ಪರ್ಧೆ ಕೊನೆಗೊಳಿಸಿದರು. ದಕ್ಷಿಣ ಆಫ್ರಿಕಾದ ಕರ್ಸ್ಟನ್ ನೊಯಿಶೇಫರ್‌ ಅವರು ಅಗ್ರಸ್ಥಾನ ಪಡೆದರು. ಮಾತ್ರವಲ್ಲ, ಈ ಪ್ರತಿಷ್ಠಿತ ರೇಸ್‌ ಗೆದ್ದ ಮೊದಲ ಮಹಿಳೆ ಎನಿಸಿಕೊಂಡರು. ಏಕಾಂಗಿಯಾಗಿ ಸಮುದ್ರಯಾನ ಮಾಡುವ ಈ ಸಾಹಸ ಸ್ಪರ್ಧೆ 2022ರ ಸೆ.4 ರಂದು ಫ್ರಾನ್ಸ್‌ನ ಲೆಸ್‌ ಸಾಬ್ಲ್‌ ದೊಲೋನ್ ಎಂಬಲ್ಲಿ ಆರಂಭವಾಗಿತ್ತು. ‘ಬಯಾನತ್‌’ ಹೆಸರಿನ ಹಾಯಿದೋಣಿಯಲ್ಲಿ ವಿಶ್ವ ಪರ್ಯಟನೆ ಮಾಡಿದ ಅವರು ಶನಿವಾರ ಅದೇ ತಾಣಕ್ಕೆ ತಲುಪಿದರು. ನೊಯಿಶೇಫರ್‌ ಅವರು ಗುರುವಾರ ತಲುಪಿದ್ದರು. ಅಭಿಲಾಷ್‌ 236 ದಿನ ಸಮುದ್ರಯಾನ ಮಾಡಿ, 48,000 ಕಿ.ಮೀ ಕ್ರಮಿಸಿ ರೇಸ್‌ ಪೂರ್ಣಗೊಳಿಸಿದ್ದಾರೆ. 2018 ರಲ್ಲಿ ನಡೆದಿದ್ದ ರೇಸ್‌ನಲ್ಲಿ ಪಾಲ್ಗೊಂಡಿದ್ದರೂ, ಅವರು ಸ್ಪರ್ಧೆ ಪೂರ್ಣಗೊಳಿಸಿರಲಿಲ್ಲ. ಅವರ ಹಾಯಿದೋಣಿ ಬಿರುಗಾಳಿಗೆ ಸಿಲುಕಿ ಮಗುಚಿದ್ದರಿಂದ ಬೆನ್ನುಮೂಳೆಗೆ ಗಂಭೀರ ಗಾಯವಾಗಿತ್ತು. 82 ದಿನಗಳನ್ನು ಸಮುದ್ರದಲ್ಲಿ ಕಳೆದಿದ್ದ ಬಳಿಕ ದುರಂತ ಸಂಭವಿಸಿತ್ತು. ಆದರೆ ಈ ಬಾರಿ ಛಲಬಿಡದೆ ರೇಸ್ ಪೂರೈಸುವಲ್ಲಿ ಯಶ ಕಂಡಿದ್ದಾರೆ. ವಾಯುಪಡೆ ಮುಖ್ಯಸ್ಥ ಏರ್‌ ಚೀಫ್‌ ಮಾರ್ಷಲ್ ವಿ.ಆರ್‌.ಚೌಧರಿ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್‌.ಹರಿಕುಮಾರ್ ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಅಭಿಲಾಷ್‌ ಸಾಧನೆಯನ್ನು ಶ್ಲಾಘಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.