ತನಿಖೆ ಎದುರಿಸಲು ಸಿದ್ಧ; ರಾಜೀನಾಮೆ ಕೊಡಲ್ಲ- ಬ್ರಿಜ್‌ ಭೂಷಣ್ ಸಿಂಗ್ ಗೊಂಡಾ, ಉತ್ತರ ಪ್ರದೇಶ: ಏಳು ಮಂದಿ ಮಹಿಳಾ ಕುಸ್ತಿಪಟುಗಳು ತಮ್ಮ ವಿರುದ್ಧ ಮಾಡಿರುವ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿ ‘ಯಾವುದೇ ರೀತಿಯ ತನಿಖೆಗೆ ಸಿದ್ಧ. ಆದರೆ ಭಾರತ ಕುಸ್ತಿ ಫೆಡರೇಷನ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ರಾಜೀನಾಮೆ ನೀಡಿದರೆ ಅವರ ಆರೋಪಗಳನ್ನು ಒಪ್ಪಿಕೊಂಡಂತಾಗುತ್ತದೆ’ ಎಂದು ಬ್ರಿಜ್‌ ಭೂಷಣ್ ಶರಣ್ ಸಿಂಗ್‌ ಶನಿವಾರ ಹೇಳಿದ್ದಾರೆ. ‘ನಾನು ಅಮಾಯಕ. ಸುಪ್ರೀಂ ಕೋರ್ಟ್‌ ಮತ್ತು ದೆಹಲಿ ಪೊಲೀಸರ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ಯಾವುದೇ ರೀತಿಯ ವಿಚಾರಣೆಯನ್ನು ಎದುರಿಸಲು ನಾನು ಸಿದ್ಧನಿದ್ದೇನೆ’ ಎಂದು ಬಿಷ್ಣೊಹರ್‌ಪುರದ ತಮ್ಮ ನಿವಾಸದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಅವರು ತಿಳಿಸಿದ್ದಾರೆ. ‘ರಾಜೀನಾಮೆ ಕೊಡುವುದು ನನಗೇನೂ ದೊಡ್ಡ ವಿಷಯ ಅಲ್ಲ. ಆದರೆ ಕ್ರಿಮಿನಲ್ ರೀತಿ ಹುದ್ದೆತ್ಯಾಗ ಮಾಡುವುದಿಲ್ಲ’ ಎಂದು ಹೇಳಿದರು. ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಶನಿವಾರ ಬೆಳಿಗ್ಗೆ ಕುಸ್ತಿಪಟುಗಳನ್ನು ಭೇಟಿ ಮಾಡಿರುವುದನ್ನು ಅವರು ಬಲವಾಗಿ ಆಕ್ಷೇಪಿಸಿದರು. ‘ಈ ವಿವಾದಗಳ ಹಿಂದೆ ಯಾರಿದ್ದಾರೆ ಎಂಬುದು ಇವತ್ತು ಗೊತ್ತಾಗಿದೆ. ಇದೆಲ್ಲದರ ಹಿಂದೆ ಒಬ್ಬ ಉದ್ಯಮಿ ಮತ್ತು ಕಾಂಗ್ರೆಸ್‌ ಕೈವಾಡ ಇದೆ ಎನ್ನುವುದನ್ನು ನಾನು ಆರಂಭದಿಂದಲೂ ಹೇಳುತ್ತ ಬಂದಿದ್ದೆ. ಅವರಿಗೆ ನನ್ನ ವಿರುದ್ಧ ಅಸಮಾಧಾನವಿದೆ’ ಎಂದು ಬ್ರಿಜ್‌ ಭೂಷಣ್ ಹೇಳಿದರು. ಆದರೆ ಈ ಬಗ್ಗೆ ವಿವರ ನೀಡಲಿಲ್ಲ. ಕೈಸರ್‌ಗಂಜ್‌ ಕ್ಷೇತ್ರದ ಬಿಜೆಪಿ ಸಂಸದರೂ ಆಗಿರುವ ಬ್ರಿಜ್‌ಭೂಷಣ್ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕೆಂದು ಆಗ್ರಹಿಸಿ ಏಪ್ರಿಲ್‌ 23 ರಿಂದ ದೇಶದ ಪ್ರಮುಖ ಕುಸ್ತಿಪಟುಗಳು ಧರಣಿ ನಡೆಸುತ್ತಿದ್ದಾರೆ. ಸಿಂಗ್ ಅವರನ್ನು ಎಲ್ಲ ಹುದ್ದೆಗಳಿಂದ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಅವರನ್ನು ಕೂಡಲೇ ಬಂಧಿಸಬೇಕೆಂದು ಕಾಂಗ್ರೆಸ್‌ ಒತ್ತಾಯಿಸಿದೆ. ಶುಕ್ರವಾರ ರಾತ್ರಿ ಸಿಂಗ್ ವಿರುದ್ಧ ದೆಹಲಿ ಪೊಲೀಸರು ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದರು. ಮೊದಲನೆಯದು ಅಪ್ರಾಪ್ತ ರೆಸ್ಲರ್‌ ಮಾಡಿರುವ ಆರೋಪಗಳಿಗೆ ಸಂಬಂಧಿಸಿದ್ದು, ಪೋಕ್ಸೊ ಅಡಿ ಪ್ರಕರಣ ದಾಖಲಾಗಿದೆ. ಇನ್ನೊಂದು ಪ್ರಕರಣ, ಶೀಲಕ್ಕೆ ಚ್ಯುತಿ ತಂದ ಆರೋಪಕ್ಕೆ ಸಂಬಂಧಿಸಿದೆ. ‘ಕುಸ್ತಿಪಟುಗಳು ಬೇಡಿಕೆಗಳೆಲ್ಲ ಈಡೇರಿದೆ. ಆದರೂ ಅವರು ಧರಣಿ ಕುಳಿತಿದ್ದಾರೆ. ಏಕೆ’ ಎಂದು ಪ್ರಶ್ನಿಸಿದರು. ‘ಇದು ಕ್ರೀಡಾಪಟುಗಳ ಧರಣಿಯಲ್ಲ. ಬದಲು ಸಂಚುಕೋರರ ಧರಣಿ’ ಎಂದು ಬ್ರಿಜ್‌ಭೂಷಣ್ ಟೀಕಿಸಿದರು. ‘ನನ್ನ ಅವಧಿ ಪೂರ್ಣಗೊಂಡಿದೆ. ಹೊಸ ಅಧ್ಯಕ್ಷರು ಆಯ್ಕೆಯಾದ ತಕ್ಷಣ ನಾನು ನಿಯಮದಂತೆ ರಾಜೀನಾಮೆ ನೀಡಬೇಕಾಗುತ್ತದೆ. ಅಲ್ಲಿಯವರೆಗೆ ಉಸ್ತುವಾರಿ ನನ್ನದು’ ಎಂದರು. 12 ವರ್ಷಗಳಿಂದ ಸಿಂಗ್, ಡಬ್ಲ್ಯುಎಫ್‌ಐ ಅಧ್ಯಕ್ಷರಾಗಿದ್ದಾರೆ. ಹೀಗಾಗಿ ಮತ್ತೊಂದು ಅವಧಿಗೆ ಅವರು ಸ್ಪರ್ಧಿಸುವಂತಿಲ್ಲ. ‘ತಮ್ಮನ್ನು ಈ ಪ್ರಕರಣದಲ್ಲಿ ಸಿಲುಕಿಸಲು ಬಾಲಕಿಯೊಬ್ಬಳನ್ನು ಬಳಸಿಕೊಂಡಿರುವ ಆಡಿಯೊ ತುಣಕನ್ನು ತನಿಖಾ ಸಮಿತಿಗೆ ಕೊಟ್ಟಿದ್ದೇನೆ’ ಎಂದೂ ಹೇಳಿದರು. ‘ಮೊದಲು ನನ್ನ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಆಗ್ರಹಿಸಿದರು. ಈಗ ಅದು ಈಡೇರಿದೆ. ಈಗ ನನ್ನನ್ನು ಜೈಲಿಗೆ ಕಳುಹಿಸಲು ಒತ್ತಾಯಿಸುತ್ತಿದ್ದಾರೆ. ನಾನು ಲೋಕಸಭಾ ಸದಸ್ಯ. ನಾನು ವಿನೇಶ್ (ಧರಣಿನಿರತ ಮಹಿಳಾ ಕುಸ್ತಿಪಟು) ಅವರ ದಯೆಯಿಂದ ಈ ಸ್ಥಾನ ಪಡೆದಿದ್ದಲ್ಲ. ನನ್ನ ಕ್ಷೇತ್ರದ ಜನರು ನನ್ನನ್ನು ಸಂಸದನಾಗಿ ಆಯ್ಕೆ ಮಾಡಿದ್ದಾರೆ’ ಎಂದು ಹೇಳಿದರು. ‘ಹರಿಯಾಣ ಮತ್ತು ಉತ್ತರ ಪ್ರದೇಶದ ‘ಅಖಾಡಗಳು’ ತಮ್ಮೊಂದಿಗಿವೆ. ಕೇವಲ ಒಂದು ಕುಟುಂಬದ ‘ಅಖಾಡ’ ತಮ್ಮ ವಿರುದ್ಧ ಇದೆ’ ಎಂದು ಬ್ರಿಜ್‌ಭೂಷಣ್ ಹೇಳಿದರು. ಪ್ರಿಯಾಂಕಾ ಭೇಟಿ: ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಶನಿವಾರ ಬೆಳಿಗ್ಗೆ ಕುಸ್ತಿ ಪಟುಗಳು ಧರಣಿ ನಡೆಸುತ್ತಿರುವ ಜಂತರ್ ಮಂಥರ್‌ಗೆ ಭೇಟಿ ನೀಡಿ ಅವರಿಗೆ ಬೆಂಬಲ ಸೂಚಿಸಿದರು. ಸರ್ಕಾರವು ಫೆಡರೇಷನ್‌ ಅಧ್ಯಕ್ಷರನ್ನು ರಕ್ಷಿಸುತ್ತಿದೆ ಎಂದು ದೂರಿದರು. ಈ ಮಧ್ಯೆ ಸರ್ಕಾರದ ತನಿಖೆಯನ್ನು ಕುಸ್ತಿಪಟುಗಳು ಪ್ರಶ್ನಿಸಿದ್ದು, ತನಿಖೆಯ ವಿವರಗಳು ಸೋರಿಕೆಯಾಗಿವೆ. ಇದರಲ್ಲಿ ಅಪ್ರಾಪ್ತ ಬಾಲಕಿ ಕುಸ್ತಿಪಟುವಿನ ಹೆಸರೂ ಇದೆ ಎಂದು ದೂರಿದ್ದಾರೆ. ‘ತನಿಖೆಯ ವಿವರಗಳನ್ನು ಸೋರಿಕೆ ಮಾಡುತ್ತಿರುವವರಾರು?’ ಎಂದು ನವದೆಹಲಿಯ ಜಂತರ್‌ಮಂಥರ್‌ನಲ್ಲಿ ಧರಣಿನಿರತ ಕುಸ್ತಿಪಟುಗಳು ಪ್ರಶ್ನಿಸಿದ್ದಾರೆ. ಪೊಲೀಸರು ತಮ್ಮೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ. ಮ್ಯಾಟ್‌ಗಳನ್ನು ಒಯ್ಯಲು ಬಿಡುವುದಿಲ್ಲ ಎಂದೂ ದೂರಿದ್ದಾರೆ ಎಂದು ಎನ್‌ಡಿಟಿವಿ ವರದಿ ತಿಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.