ಐಎಸ್‌ಎಸ್ಎಫ್‌ ವಿಶ್ವಕಪ್‌ ಶೂಟಿಂಗ್‌ನಲ್ಲಿ ರಿದಮ್‌ ಸಂಗ್ವಾನ್‌ ವಿಶ್ವದಾಖಲೆ ಬಾಕು (ಪಿಟಿಐ): ಭಾರತದ ಶೂಟರ್‌ ರಿದಮ್‌ ಸಂಗ್ವಾನ್‌ ಅವರು ಮಹಿಳೆಯರ 25 ಮೀ. ಪಿಸ್ತೂಲ್‌ ಸ್ಪರ್ಧೆಯಲ್ಲಿ 29 ವರ್ಷಗಳ ಹಳೆಯ ವಿಶ್ವದಾಖಲೆಯನ್ನು ಮುರಿದರು. ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ವಿಶ್ವಕಪ್‌ ಶೂಟಿಂಗ್‌ನಲ್ಲಿ ಶನಿವಾರ ನಡೆದ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ರಿದಮ್‌ 595 ಪಾಯಿಂಟ್ಸ್‌ಗಳೊಂದಿಗೆ ಅಗ್ರಸ್ಥಾನ ಪಡೆದರು. ಆದರೆ ಫೈನಲ್ಸ್‌ನಲ್ಲಿ ಎಡವಿದ ಅವರು ಎಂಟನೇ ಸ್ಥಾನ ಪಡೆದರು. ಬಲ್ಗೇರಿಯದ ಡಯಾನಾ ಅಯೊರ್ಗೊವಾ ಅವರು 1994 ರಲ್ಲಿ ಮಿಲಾನ್‌ನಲ್ಲಿ ನಡೆದಿದ್ದ ಕೂಟದಲ್ಲಿ 594 ಪಾಯಿಂಟ್ಸ್‌ ಗಳಿಸಿದ್ದು ಇದುವರೆಗಿನ ವಿಶ್ವದಾಖಲೆ ಆಗಿತ್ತು. ಇದೇ ವರ್ಷ ಮಾರ್ಚ್‌ನಲ್ಲಿ ಭೋಪಾಲ್‌ನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಜರ್ಮನಿಯ ಡೊರೀನ್ ವೆನ್‌ಕಾಂಪ್‌ ಅವರು ಈ ದಾಖಲೆ ಸರಿಗಟ್ಟಿದ್ದರು. ಅರ್ಹತಾ ಹಂತದಲ್ಲಿ ಮಿಂಚಿದ ರಿದಮ್‌ಗೆ ಪದಕ ಗೆಲ್ಲುವ ಅದೃಷ್ಟ ಇರಲಿಲ್ಲ. ಎಂಟು ಸ್ಪರ್ಧಿಗಳು ಪೈಪೋಟಿ ನಡೆಸಿದ ಫೈನಲ್ಸ್‌ನಲ್ಲಿ ಅವರು ಕೊನೆಯ ಸ್ಥಾನ ಪಡೆದರು. ಚೀನಾದ ಫೆಂಗ್‌ ಸಿಕ್ಸುವಾನ್‌ ಚಿನ್ನ ಗೆದ್ದರೆ, ಇರಾನ್‌ನ ಹನಿಯಾ ರೊಸ್ತಾಮಿಯಾನ್‌ ಮತ್ತು ಡೊರೀನ್‌ ವೆನ್‌ಕಾಂಪ್‌ ಅವರು ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಪಡೆದುಕೊಂಡರು. ಬುಧವಾರ ನಡೆದಿದ್ದ ಮಹಿಳೆಯರ 10 ಮೀ. ಏರ್‌ ಪಿಸ್ತೂಲ್‌ ವಿಭಾಗದಲ್ಲಿ ರಿದಮ್‌ ಕಂಚು ಗೆದ್ದುಕೊಂಡಿದ್ದರು. ಭಾರತದ ಶೂಟರ್‌, 25 ಮೀ. ಪಿಸ್ತೂಲ್‌ ವಿಭಾಗದಲ್ಲಿ ಜೂನಿಯರ್‌ ಮಹಿಳೆಯರ ವಿಶ್ವದಾಖಲೆಯನ್ನೂ ಮುರಿದರು. ಜೂನಿಯರ್‌ ವಿಭಾಗದಲ್ಲಿ ರಷ್ಯಾದ ನಿನೊ ಸಲುಕ್‌ವಾಡ್ಜೆ ಅವರು 34 ವರ್ಷಗಳ ಹಿಂದೆ ಅರ್ಹತಾ ಸುತ್ತಿನಲ್ಲಿ 593 ಪಾಯಿಂಟ್ಸ್‌ ಗಳಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಭಾರತದ ಮನು ಭಾಕರ್‌ ಅವರು 2018ರ ಏಷ್ಯನ್‌ ಗೇಮ್ಸ್‌ನಲ್ಲಿ ಈ ದಾಖಲೆ ಸರಿಗಟ್ಟಿದ್ದರು. ಭಾರತದ ಶೂಟರ್‌ಗಳು ಶನಿವಾರ ಯಾವುದೇ ಪದಕ ಗೆಲ್ಲಲಿಲ್ಲ. ಮಹಿಳೆಯರ 25 ಮೀ. ಪಿಸ್ತೂಲ್‌ ಸ್ಪರ್ಧೆಯಲ್ಲಿ ಕಣದಲ್ಲಿದ್ದ ಇತರ ಶೂಟರ್‌ಗಳಾದ ಇಶಾ ಸಿಂಗ್‌ ಮತ್ತು ಮನು ಅವರು ಕ್ರಮವಾಗಿ 13 ಹಾಗೂ 27ನೇ ಸ್ಥಾನ ಪಡೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.