ಮಹಿಳಾ ಹಾಕಿ: ಭಾರತಕ್ಕೆ ಗೆಲುವಿನ ನಿರೀಕ್ಷೆ ಅಡಿಲೇಡ್‌: ಭಾರತ ಮತ್ತು ಆಸ್ಟ್ರೇಲಿಯಾ ಮಹಿಳಾ ಹಾಕಿ ತಂಡಗಳ ನಡುವಣ ಮೂರು ಪಂದ್ಯಗಳ ಸರಣಿಯ ಎರಡನೇ ಪಂದ್ಯ ಶನಿವಾರ ಇಲ್ಲಿ ನಡೆಯಲಿದ್ದು, ಸವಿತಾ ಪೂನಿಯಾ ಬಳಗ ಗೆಲುವಿನ ನಿರೀಕ್ಷೆಯಲ್ಲಿದೆ. ಗುರುವಾರ ನಡೆದಿದ್ದ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ 4–2 ಗೋಲುಗಳಿಂದ ಗೆದ್ದಿತ್ತು. ಸರಣಿ ಸೋಲು ತಪ್ಪಿಸಲು ಭಾರತಕ್ಕೆ ಎರಡನೇ ಪಂದ್ಯದಲ್ಲಿ ಜಯ ಅನಿವಾರ್ಯ. ಏಷ್ಯನ್‌ ಗೇಮ್ಸ್‌ಗೆ ತಯಾರಿ ನಡೆಸುವ ನಿಟ್ಟಿನಲ್ಲಿ ಭಾರತ ತಂಡ ಈ ಸರಣಿಯಲ್ಲಿ ಆಡುತ್ತಿದೆ. ಮೊದಲ ಪಂದ್ಯದಲ್ಲಿ ಆಕ್ರಮಣ ಮತ್ತು ರಕ್ಷಣಾ ವಿಭಾಗಗಳಲ್ಲಿ ಚೇತರಿಕೆಯ ಪ್ರದರ್ಶನ ನೀಡಲು ಪ್ರವಾಸಿ ತಂಡ ವಿಫಲವಾಗಿತ್ತು.‍ ತನಗೆ ಸಿಕ್ಕ ಕೆಲವೊಂದು ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಗೋಲಾಗಿ ಪರಿವರ್ತಿಸುವಲ್ಲಿ ಭಾರತ ಎಡವಿತ್ತು. ಈ ವಿಭಾಗದಲ್ಲೂ ಸುಧಾರಣೆ ಕಾಣಬೇಕಿದೆ. ಗೋಲ್‌ಕೀಪರ್‌ ಸವಿತಾ ಅವರ ಉತ್ತಮ ಪ್ರದರ್ಶನ ಇಲ್ಲದೇ ಇರುತ್ತಿದ್ದಲ್ಲಿ, ಭಾರತದ ಸೋಲಿನ ಅಂತರ ಇನ್ನಷ್ಟು ಹೆಚ್ಚುತ್ತಿತ್ತು. ಸವಿತಾ ಅವರು ಎದುರಾಳಿ ತಂಡದ ಕೆಲವೊಂದು ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ತಡೆದಿದ್ದರು. ಸರಣಿಯ ಮೂರನೇ ಪಂದ್ಯ ಭಾನುವಾರ ನಡೆಯಲಿದೆ. ಆ ಬಳಿಕ ಮೇ 25 ಮತ್ತು 27 ರಂದು ಆಸ್ಟ್ರೇಲಿಯಾ ‘ಎ’ ತಂಡದ ವಿರುದ್ಧ ಎರಡು ಪಂದ್ಯಗಳನ್ನಾಡಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.