ಕುಸ್ತಿಪಟುಗಳ ಧರಣಿಗೆ ಜಾವೆಲಿನ್ ಚಾಂಪಿಯನ್ ನೀರಜ್ ಚೋಪ್ರಾ ಬೆಂಬಲ ನವದೆಹಲಿ: ಭಾರತೀಯ ಕುಸ್ತಿ ಫೆಡರೇಷನ್‌ ಅಧ್ಯಕ್ಷ ಬ್ರಿಜ್ ಭೂಷಣ್‌ ಶರಣ್ ಸಿಂಗ್ ಅವರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿ ನಡೆಸುತ್ತಿರುವ ಕುಸ್ತಿಪಟುಗಳ ಧರಣಿಗೆ ಚಿನ್ನದ ಪದಕ ವಿಜೇತ ಒಲಿಂಪಿಯನ್ ನೀರಜ್ ಚೋಪ್ರಾ ಬೆಂಬಲ ನೀಡಿದ್ದಾರೆ. ‘ಕುಸ್ತಿಪಟುಗಳ ಮನವಿಗೆ ತಕ್ಷಣ ಸ್ಪಂದಿಸಿ ನ್ಯಾಯ ಒದಗಿಸಬೇಕು‘ ಎಂದು ಜಾವೆಲಿನ್ ಚಾಂಪಿಯನ್ ನೀರಜ್ ಕೋರಿದ್ದಾರೆ. ‘ಅಥ್ಲೀಟ್‌ಗಳು ಬೀದಿಗಿಳಿದು ನ್ಯಾಯ ಕೇಳುವುದು ನೋಡಿ ನನಗೆ ನೋವಾಗಿದೆ. ಅವರು ಭಾರತೀಯರಿಗೆ ಹೆಮ್ಮೆ ತರಲು ಕಷ್ಟಪಟ್ಟು ತಯಾರಿ ನಡೆಸಿ ದೇಶವನ್ನು ಪ್ರತಿನಿಧಿಸಿರುತ್ತಾರೆ. ರಾಷ್ಟ್ರದ ಸಮಗ್ರ ದೃಷ್ಟಿಕೋನದಿಂದ ಪ್ರತಿಯೊಬ್ಬ ವ್ಯಕ್ತಿಯ ಸುರಕ್ಷತೆ, ಸಮಗ್ರತೆ ಮತ್ತು ಘನತೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ಈಗ ಏನಾಗುತ್ತಿದ್ದೆಯೋ ಅದು ಎಂದಿಗೂ ಘಟಿಸಬಾರದು‘ ಎಂದು ನೀರಜ್ ಟ್ಟೀಟ್‌ ಮಾಡಿದ್ದಾರೆ. ../ ಕಳೆದ ಆರು ದಿನಗಳಿಂದ ನಡೆಯುತ್ತಿರುವ ಈ ಧರಣಿಯನ್ನು ಒಲಿಂಪಿಕ್ ಕುಸ್ತಿಪಟುಗಳಾದ ವಿನೇಶಾ ಫೋಗಟ್‌, ಬಜರಂಗ್ ಪೂನಿಯಾ ಹಾಗೂ ಸಾಕ್ಷಿ ಮಲಿಕ್ ಅವರು ಮುನ್ನಡೆಸುತ್ತಿದ್ದಾರೆ. ಬಾಕ್ಸರ್ ನಿಖಾತ್ ಜರೀನ್, ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ, ಹಾಕಿ ಆಟಗಾರ್ತಿ ರಾಣಿ ರಾಂಪಾಲ್, ಹೆಸರಾಂತ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್ , ಇರ್ಫಾನ್ ಪಠಾಣ್, ಮದನ್ ಲಾಲ್, ನವಜೋತ್ ಸಿಂಗ್ ಸಿಧು ಇವರೆಲ್ಲರೂ ಕುಸ್ತಿಪಟುಗಳ ಕೂಗಿಗೆ ಬೆಂಬಲ ಸೂಚಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.